ಧರ್ಮದ ಮೇಲೆ ಸಮಾಜ ವಿಭಜಿಸುವ ಪ್ರಯತ್ನ: ರಾಜ್ಯಪಾಲರ ವಿರುದ್ದ ಉದ್ದವ್ ಠಾಕ್ರೆ ಆಕ್ರೋಶ

ಮುಂಬೈ,ಜು. 30- ರಾಜ್ಯಪಾಲರ ಭಗತ್ ಸಿಂಗ್ ಕೋಶ್ಯಾರಿ ಮರಾಠಿಗರನ್ನು ಅವಮಾನಿಸುವ ಮೂಲಕ ಧರ್ಮದ ಹೆಸರಲ್ಲಿ ಸಮಾಜ ವಿಭಜಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಶಿವಸೇನೆ ಮುಖ್ಯಸ್ಥ ಹಾಗು ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯಪಾಲ ಹುದ್ದೆಯಲ್ಲಿರುವವರನ್ನು ಅವಮಾನಿಸಲು ಬಯಸುವುದಿಲ್ಲ. ಅವರ ಕುರ್ಚಿಯನ್ನು ಗೌರವಿಸುತ್ತೇನೆ ಆದರೆ ಮುಂಬೈ, ಮತ್ತು ಥಾಣೆಯ ಅಭಿವೃದ್ದಿಗೆ ರಾಜಸ್ತಾನ ಮತ್ತು ಗುಜರಾತಿಗರ ಕೊಡುಗೆ ಅಪಾರ ಎಂದಿರುವುದು ಮರಾಠಿಗರನ್ನು ಅವಮಾನ ಮಾಡಿದ್ದಾರೆ ಎಂದು ದೂರಿದ್ದಾರೆ.

ರಾಜ್ಯಪಾಲರು ಸಮಾಜವನ್ನು ಧರ್ಮದ ಮೇಲೆ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ, ಅವರು ಎಲ್ಲ ಮಿತಿಗಳನ್ನು ಮೀರುತ್ತಿದ್ದಾರೆ ಎಂದು ಹರಿ ಹಾಯ್ದಿದ್ದಾರೆ.

ರಾಜ್ಯಪಾಲರು ರಾಷ್ಟ್ರಪತಿಗಳ ಸಂದೇಶವಾಹಕರು, ರಾಷ್ಟ್ರದಾದ್ಯಂತ ರಾಷ್ಟ್ರಪತಿಗಳ ಮಾತುಗಳನ್ನು ತಿಳಿಸುವುದಷ್ಟೇ ಅವರ ಕೆಲಸ. ಅದೇ ಅವರೇ ತಪ್ಪುಗಳನ್ನು ಮಾಡಿದರೆ ಅವರ ವಿರುದ್ಧ ಯಾರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯಪಾಲರು, ಮರಾಠಿಗರನ್ನು ಮತ್ತು ಅವರ ಹೆಮ್ಮೆಯನ್ನು ಅವಮಾನಿಸಿದ್ದಾರೆ ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾದ್ಯವೇ ಇಲ್ಲ ಎಂದು ಗುಡುಗಿದ್ದಾರೆ.

ಭಗತ್ ಸಿಂಗ್ ಕೊಶ್ಯಾರಿ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿ ಕಳೆದ 2.5 ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ ಎಲ್ಲವನ್ನೂ ಅನುಭವಿಸಿದ್ದಾರೆ. ಜೊತೆಗೆ ಮಹಾರಾಷ್ಟ್ರದ ಪಾಕಪದ್ಧತಿ ಆನಂದಿಸಿದ್ದಾರೆ. ಈಗ ಅವರು ಕೊಲ್ಹಾಪುರಿ ಚಪ್ಪಲ್ ಅನ್ನು ನೋಡಬೇಕಾದ ಸಮಯ ಬಂದಿದೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.