ಧರ್ಮದ ಪೂಜಾರಿಗೆ ಸರ್ಕಾರ ಅನುದಾನ ನೀಡಬೇಕು: ಜುಮನಾಳ

ಶಹಾಬಾದ:ಆ.8:ಕರ್ನಾಟಕ ರಾಜ್ಯದ ಪಟ್ಟದ ಪೂಜಾರಿಗಳ ಹಾಗೂ ಜಡೆತಲೆ ಪೂಜಾರಿಗಳ ಧರ್ಮದ ವಸ್ತುಗಳಾದ ಭಂಡಾರ, ಡೊಳ್ಳು, ಬೆತ್ತ, ಕಂಬಳಿ ಹಾಲು ಮತದ ಪೂಜನೀಯ ವಸ್ತುಗಳಾಗಿವೆ, ಅವುಗಳನ್ನು ಉಪಯೋಗಿಸುವಾಗ ಶೃದ್ದೆಯಿಂದ ಬಳಸಬೇಕು, ಸರ್ಕಾರ ಹಾಲು ಮತದ ಪೂಜಾರಿಗೆ ಮಾಶಾಸನ, ಮಕ್ಕಳಿಗೆ ಉಚಿತ ಶಿಕ್ಷಣ, ದೇವಸ್ಥಾನಗಳಿಗೆ ಅನುದಾನ ನೀಡಬೇಕೆಂದು ವಿಜಯಪುರ ಡಿಸಿಸಿ ಬ್ಯಾಂಕ್ ಮಾಜಿ ನಿರ್ಧೇಶಕ ಬೀರಪ್ಪ ಜುಮುನಾಳ ಆಗ್ರಹಿಸಿದರು. ಅವರು ಭಾನುವಾರ ಹೊನಗುಂಟಾ ಗ್ರಾಮದ ಶ್ರೀ ಶಿವಸಿದ್ದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ವಿಜಯಪುರ, ಯಾದಗಿರಿ, ಕಲಬುರಗಿ ಜಿಲ್ಲೆಯ ಹಾಲು ಮತದ ಶ್ರೀ ಪಟ್ಟದ ಪೂಜಾರಿ ಹಾಗೂ ಜಡೆ ಪೂಜಾರಿಗಳ “ಧರ್ಮ ಸಭೆ”ಯಲ್ಲಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು. ಹಾಲು ಮತದ ಗೌರವಾಧ್ಯಕ್ಷ ಮಾಲಹಳ್ಳಿಯ ಕೆಂಚರಾಯ ಮಾತನಾಡಿ ಎಲ್ಲಾ ಹಾಲುಮತದ ಪೂಜ್ಯರು ಒಂದಾಗಿ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಿ, ಉತ್ತಮ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿದರೆ, ನಮ್ಮ ಮತ ಶ್ರೀಮಂತವಾಗುವದು, ಅದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಶಿರಸಗಿ ಬೀರೇಶ್ವರ ಮಠದ ಬೀರಣ್ಣ ಮುತ್ಯಾ, ಬಸವಪಟ್ಟಣದ ಮರೆಪ್ಪ ಮುತ್ಯಾ ಮಾತನಾಡಿದರು. ಧರ್ಮಸಭೆಯ ಸಾನಿಧ್ಯವನ್ನು ಮಾಳಿಂಗರಾಯ ಅಧ್ಯಕ್ಷತೆಯನ್ನು ಪದ್ಮಣ್ಣ ಮುತ್ಯಾ ವಹಿಸಿದ್ದರು. ಬೆಳಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳು ವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಜಟ್ಟೀಂಗೇಶ್ವರ ದೇವಸ್ಥಾನ, ಹನುಮಾನ ದೇವಸ್ಥಾನದಲ್ಲಿ ಪೂಜ್ಯರಿಂದ ವಿಶೇಷ ಪೂಜೆ ನಡೆಯಿತು. ನಂತರ ಗ್ರಾಮದ ಶಿವ ಸಿದ್ದ ಬೀರಲಿಂಗೇಶ್ವರ ಕತುೃ ಗದ್ದುಗೆಗೆ ವಿಶೇಷ ಪೂಜೆ ನಡೆಸಿ, ಸರ್ವ ಪೂಜ್ಯರಿಂದ ದೀಪ ಬೆಳಗಿಸುವ ಮೂಲಕ ಧರ್ಮಸಭೆಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ತಿಡುಂಗಿ ಬಸನಸಿದ್ದ ಮಹಾರಾಜ, ಬೀರಪ್ಪ ಪೂಜಾರಿ, ಸಿದ್ದು ಪೂಜಾರಿ, ಶಂಕರ ಪೂಜಾರಿ, ರಾಜು ಪೂಜಾರಿ, ಶಿವಪ್ಪ ಪೂಜಾರಿ, ರಾಮಣ್ಣ ಪೂಜಾರಿ ಹೊಸೂರ, ಬರ್ಮಣ್ಣ ಪೂಜಾರಿ ತಳವಾಡ, ಕಲ್ಲಪ್ಪ ಪೂಜಾರಿ, ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಜಿಲ್ಲಾ ಅಧ್ಯಕ್ಷ ಬಸವರಾಜ ಮದ್ರಕಿ, ಸಾಬಣ್ಣ ಕೊಲ್ಲೂರ, ಮಲ್ಕಣ್ಣ ಮುದ್ದಾ, ರೇವಣಸಿದ್ದ ಪಾರಾಗಾರ್, ಶಿವು ಪೂಜಾರಿ ಭಂಕೂರ, ವಿಜಯ ಕಂಠಿಕರ್ ಸೇರಿದಂತೆ ಮೂರು ಜಿಲ್ಲೆಗಳ ಸಮಾಜದ ಗಣ್ಯರು ಪಾಲ್ಗೊಂಡಿದ್ದರು.