ಧರ್ಮದ ತಳಹದಿಯ ಮೇಲೆ ಜೀವನ ರೂಪಿತಗೊಳ್ಳಲಿ : ಶ್ರೀ ರಂಭಾಪುರಿ ಶ್ರೀ 

ರಾಣೆಬೆನ್ನೂರು-ನ.೨೧;ಮನುಷ್ಯನ ಜೀವನದ ಉನ್ನತಿಗೆ ಧರ್ಮ ದಿಕ್ಸೂಚಿ. ಜೀವನ ಧರ್ಮದ ತಳಹದಿಯ ಮೇಲೆ ರೂಪಿತಗೊಳ್ಳಬೇಕು ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು. ಅವರು ನಗರದ ಹೊರವಲಯದಲ್ಲಿರುವ ಹಿರೇಮಠದ ಶನೈಶ್ವರ ಮಂದಿರದಲ್ಲಿ ಜರುಗಿದ ಲಕ್ಷ ದೀಪೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಮನುಷ್ಯನಲ್ಲಿ ವೈಚಾರಿಕತೆ ಎಷ್ಟಾದರೂ ಬೆಳೆಯಲಿ ಆದರೆ ನಾಸ್ತಿಕ ಮನೋಭಾವನೆ ಬೆಳೆಯಬಾರದು. ವಿಶ್ವ ಬಂಧುತ್ವ ಸಾರಿದ ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ದಶ ಧರ್ಮ ಸೂತ್ರಗಳನ್ನು ಬೋಧಿಸಿ ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ್ದಾರೆ. ಸ್ವಧರ್ಮದಲ್ಲಿ ನಿಷ್ಠೆ ಪರಧರ್ಮದಲ್ಲಿ ಸಹಿಷ್ಣತೆ ಇರಲಿ. ಪ್ರತಿಯೊಬ್ಬರೂ ಸಾಮರಸ್ಯ ಸದ್ಭಾವನೆಯಿಂದ ನಡೆದಾಗ ಲೋಕದಲ್ಲಿ ಶಾಂತಿ ಸಮೃದ್ಧಿ ಉಂಟಾಗುತ್ತದೆ. ಶ್ರೀ ಶನೈಶ್ವರಸ್ವಾಮಿ ಕ್ಷೇತ್ರಕ್ಕೆ ಆಗಮಿಸುವ ಜನತೆಗೆ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಒಳಿತನ್ನೇ ಬಯಸುತ್ತಾ ಬಂದಿದ್ದಾರೆ ಎಂದರು.ಚಲನಚಿತ್ರ ನಟ ನಿರ್ದೇಶಕ ಡಾ.ರವಿಚಂದ್ರನ್ ಅವರಿಗೆ ಮನುಕುಲ ಸದ್ಭಾವನಾ ರಾಷ್ಟಿçÃಯ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು. ಶಾಸಕ ಅರುಣಕುಮಾರ ಪೂಜಾರ ಸಮಾರಂಭವನ್ನು ಉದ್ಘಾಟಿಸಿದರು. ಶನೈಶ್ವರ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಬಂಕಾಪುರದ ರೇವಣಸಿದ್ಧೇಶ್ವರ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಸಿದ್ಧಲಿಂಗ ಶಿವಾಚಾರ್ಯರು, ವೀರಸಂಗಮೇಶ್ವರ ಶಿವಾಚಾರ್ಯರು, ಕೊಡಿಯಾಲ ಹೊಸಪೇಟೆ ಜಗದೀಶ್ವರ ಶ್ರೀಗಳು ಉಪಸ್ಥಿತರಿದ್ದರು. ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಶಾಸಕ ಯು.ಬಿ.ಬಣಕಾರ, ಡಾ.ಬಸವರಾಜ ಕೇಲಗಾರ, ಎಸ್.ಎಸ್.ರಾಮಲಿಂಗಣ್ಣವರ ಸೇರಿದಂತೆ ಅನೇಕ ಗಣ್ಯರು ರಾಜಕೀಯ ಧುರೀಣರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು. ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.