
ಬೀದರ್: ಮಾ.7:ಸದ್ಗುರು ಹಾವಗಿ ಸ್ವಾಮಿ ಜಾತ್ರೆ ಹಾಗೂ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಭಾಲ್ಕಿ ತಾಲ್ಲೂಕಿನ ಶಿವಣಿ ಗ್ರಾಮದಲ್ಲಿ ಶ್ರದ್ಧೆ, ಭಕ್ತಿಯಿಂದ ನಡೆಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಲಂಕೃತ ರಥದಲ್ಲಿ ರೇಣುಕಾಚಾರ್ಯರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು. ಕುಂಭ ಕಳಸ ಹೊತ್ತ 108 ಸುಮಂಗಲೆಯರು, ವಾದ್ಯ ಮೇಳ, ಮೃದಂಗ, ಭಜನೆ ಮೊದಲಾದ ಕಲಾ ತಂಡಗಳು ಮೆರವಣಿಗೆಯ ವೈಭವ ಹೆಚ್ಚಿಸಿದವು.
ಬಳಿಕ ಮಠದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಹಲಬರ್ಗಾ-ಶಿವಣಿ-ಹೈದರಾಬಾದ್ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯರು, ಕೋಲನಪಾಕ್ ಸೋಮೇಶ್ವರ ಲಿಂಗದಲ್ಲಿ ಉದ್ಭವಿಸಿದ ರೇಣುಕಾಚಾರ್ಯರು, ರಂಭಾಪುರಿ ಪೀಠ ಸ್ಥಾಪಿಸಿದ್ದರು. ಲಿಂಗ ದೀಕ್ಷೆ, ವಿಭೂತಿ, ರುದ್ರಾಕ್ಷಿ ಕೊಟ್ಟು ಭಕ್ತರ ಉದ್ಧಾರಕ್ಕೆ ಶ್ರಮಿಸಿದ್ದರು ಎಂದು ಹೇಳಿದರು.
ಪಂಚ ಪೀಠಗಳಾದ ರಂಭಾಪುರಿ, ಉಜ್ಜಯನಿ, ಕೇದಾರ, ಶ್ರೀಶೈಲ ಹಾಗೂ ಕಾಶಿ ಪೀಠಗಳು ಮಾನವ ಧರ್ಮಕ್ಕೆ ಜಯವಾಗಲಿ ಎಂದು ಸಾರಿವೆ ಎಂದು ತಿಳಿಸಿದರು.
ಧರ್ಮದಿಂದಲೇ ವಿಶ್ವದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಗೊಳ್ಳಲು ಸಾಧ್ಯವಿದೆ. ಜೀವನ ಸಾರ್ಥಕಕ್ಕೆ ಎಲ್ಲರೂ ಆಧ್ಯಾತ್ಮದ ಒಲವು ಬೆಳೆಸಿಕೊಳ್ಳಬೇಕು. ಭಕ್ತಿ ಮಾರ್ಗದಲ್ಲಿ ಸಾಗಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಅರವಿಂದ ನೀಲಾ, ಸದಸ್ಯ ಶ್ರೀನಿವಾಸ ಬಿರಾದಾರ, ಪಿಡಿಒ ಬಾಲಾಜಿ ಕಮಲನಗರ, ವೇದಮೂರ್ತಿ ಚಂದ್ರಕಾಂತ ಸ್ವಾಮೀಜಿ, ಅಶೋಕ ನೀಲಾ, ಬಸವರಾಜ ಪಾರಶೆಟ್ಟೆ, ಬಾಬು ಬೇಲೂರೆ ಮತ್ತಿತರರು ಇದ್ದರು.