ಧರಣಿ ಶೆಟ್ಟಿಗೆ ಗೌರವ ಸಮರ್ಪಣೆ

ಕೋಲಾರ,ಜು,೧೦-ಬಾಗಲಕೋಟೆ ತೋಟಗಾರಿಕಾ ವಿವಿ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ತೋಟಗಾರಿಕಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ವಿಶ್ವವಿದ್ಯಾನಿಲಯದ ೧೨ನೇ ಘಟಕೋತ್ಸವದಲ್ಲಿ ತೋಟಗಾರಿಕಾ ಬಿಎಸ್ಸಿ ಪದವಿಯಲ್ಲಿ ಅತಿ ಹೆಚ್ಚು ಅಂಕದ ಜೊತೆ ಮೊದಲ ರಾಂಕ್‌ನೊಂದಿಗೆ ೧೬ ಚಿನ್ನದ ಪದಕ ಪಡೆದು ವಿಶ್ವವಿದ್ಯಾನಿಲಯದಲ್ಲಿ ದಾಖಲೆ ನಿರ್ಮಿಸಿದ ಸುಗಟೂರಿನ ಧರಣಿ ಶೆಟ್ಟಿರನ್ನು ಕೃಷಿಕ ಸಮಾಜದಿಂದ ಅಭಿನಂದಿಸಿದರು.
ತಾಲೂಕು ಕೃಷಿಕ ಸಮಾಜದಿಂದ ೫೦ ಸಾವಿರ ಚೆಕ್ ಧರಣಿ ಶೆಟ್ಟಿ ಉನ್ನತ ವಿದ್ಯಾಭ್ಯಾಸಕ್ಕಾಗಿ ರಾಜ್ಯ ಬೀಜ ನಿಗಮ ನಿರ್ದೇಶಕ ಮತ್ತು ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ವಡಗೂರು ನಾಗರಾಜು ವಿತರಿಸಿ ಮಾತನಾಡಿ, ಸತತ ಪರಿಶ್ರಮ, ಕಠಿಣ ಅಭ್ಯಾಸದಿಂದ ೧೬ ಚಿನ್ನದ ಪದಕದೊಂದಿಗೆ ಪದವಿ ಪಡೆದು ಕಿರಾಣಿ ಅಂಗಡಿಯೊಂದಿಗೆ ಜೀವನ ನಡೆಸುತ್ತಿರುವ ವರ್ತಕ ನಾಗೇಂದ್ರ ಶೆಟ್ಟಿ ಮತ್ತು ಸವಿತಾ ದಂಪತಿ ಪುತ್ರಿ ಜಿಲ್ಲೆಯ ಗೌರವ ಹೆಚ್ಚಿಸಿದ್ದಾರೆಂದು ಅಭಿಪ್ರಾಪಟ್ಟರು.
ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ನಾಗನಾಳ ಮಂಜುನಾಥ್ ಮಾತನಾಡಿ, ವಿದ್ಯೆ ಸಾಧಕರ ಸ್ವತ್ತೆ ಹೊರತು ಶ್ರೀಮಂತರ ಸ್ವತ್ತು ಅಲ್ಲ, ಗ್ರಾಮೀಣ ಪ್ರತಿಭೆ ಧರಣಿಶೆಟ್ಟಿ ಸಾಧಿಸಿ ತೋರಿಸಿದ್ದಾರೆ. ಒಂದು ಸಂವೇದನಾಶೀಲ ಮನಸ್ಸಿಗೆ ಎಲ್ಲಾ ವಿಧದಲ್ಲಿಯೂ ಇಂಬು ಕೊಡುವಂತಹ ಗೌರವ ಎಂದು ಬಣ್ಣಿಸಿದರು.
ರಾಜ್ಯ ಕೃಷಿಕ ಸಮಾಜದ ನಿರ್ದೇಶಕ ಆನೇಪುರ ಹನುಮಂತಪ್ಪ, ಜಿಲ್ಲಾ ಕೃಷಿಕ ಸಮಾಜ ಉಪಾಧ್ಯಕ್ಷ ರಾಜರೆಡ್ಡಿ, ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಮಾದಮಂಗಲ ಮಂಜುನಾಥ್, ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಮಹೇಶ್ ಬಾಬು, ಗ್ರಾಪಂ ಸದಸ್ಯ ಅಂಕತಟ್ಟಿ ಭೂಪತಿ ಗೌಡ, ಮುಖಂಡ ಹನುಮಗೌಡ, ಶಿಕ್ಷಕ ರಮೇಶ್ ಇದ್ದರು.