ಧಮ್ಮ ಕವಿಗೋಷ್ಠಿ

ಕಲಬುರಗಿ:ಅ.14:ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ ಅಂಬೇಡ್ಕರವರು ಭೌದ್ಧ ಧಮ್ಮ ಸ್ವೀಕರಿಸಿದ 65ನೇ ಧಮ್ಮಚಕ್ರ ಪ್ರವರ್ತನ ದಿನಾಚರಣೆ ಪ್ರಯುಕ್ತ ಕಲಬುರ್ಗಿ ಮಹಾನಗರದಲ್ಲಿಂದು ದೇವಿಂದ್ರಪ್ಪ ಜಿಸಿ ಸಾಹಿತ್ಯ, ಸಂಗೀತ ಕಲಾ ಸಂಸ್ಥೆಯ ಆಶ್ರಯದಲ್ಲಿ “ಧಮ್ಮ ಕವಿಗೋಷ್ಠಿ” ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗುಲ್ಬರ್ಗಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ ರಮೇಶ ಲಂಡನಕರ ಕವಿಗೋಷ್ಠಿ ಉದ್ಘಾಟಿಸಿ, ಪ್ರಜ್ಞೆ ಶೀಲ ಕರುಣೆಯ ಪಾಲನೆಯಿಂದ ಹೊಸ ಸಮಾಜ ನಿರ್ಮಾಣ ಸಾಧ್ಯ ಎಂದರು. ಕಲಬುರ್ಗಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ ಸದಾನಂದ ಪೆರ್ಲ ಅವರು ಅಧ್ಯಕ್ಷತೆ ವಹಿಸಿ, ಡಾ ಅಂಬೇಡ್ಕರವರ ಕನಸಿನ ಭಾರತ ಕಟ್ಟಲು ನಾವೇಲ್ಲ ಪರಿವರ್ತನೆಗೊಳ್ಳಬೇಕು. ಸಾಹಿತ್ಯದಿಂದ ಬದುಕು ಕಟ್ಟಿ ಕೊಳ್ಳಲು ಬುದ್ಧ ಬಸವ ಡಾ ಅಂಬೇಡ್ಕರ್ ಹಾಗೂ ನಾರಾಯಣ ಗುರುಗಳ ಆದರ್ಶಗಳು ನಮ್ಮದಾಗಬೇಕು ಎಂದರು.
ಪತ್ರಕರ್ತ, ಸಾಹಿತಿ ಧರ್ಮಣ್ಣ ಎಚ್ ಧನ್ನಿ, ಪ್ರಾಂಶುಪಾಲ ಮಹೇಶಕುಮಾರ ಮಾಡಗಿ, ನಿವೃತ್ತ ಪ್ರಾಚಾರ್ಯ ಈಶ್ವರ ಇಂಗಿನ ಭಾಗವಹಿಸಿದರು. ಸಂಸ್ಥೆ ಅಧ್ಯಕ್ಷ ಸಿದ್ಧಾರ್ಥ ಚಿಮ್ಮಾ ಇದ್ಲಾಯಿ ಪ್ರಾಸ್ತಾವಿಕವಾಗಿ ಮಾತಾಡಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ 16 ಜನ ಕವಿಗಳು ಸ್ವರಚಿತ ಕವನ ವಾಚಿಸಿದರು.