ಧನ್ನೂರ ಗ್ರಾಮದ ದಲಿತರ ಸ್ಮಶಾಣಕ್ಕೆ ತತ್ ಕ್ಷಣವೇ ಪಟ್ಟಾಭೂಮಿ ಖರೀದಿಸಿ, ಹಸ್ತಾಂತರಿಸಲು ಈಶ್ವರ ಖಂಡ್ರೆ ಆಗ್ರಹ

ಬೀದರ ಸೆ.20: ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಧನ್ನೂರು (ಎಚ್) ಗ್ರಾಮದಲ್ಲಿ ಸ್ಮಶಾಣಕ್ಕೆ ಸರ್ಕಾರಿ ಜಾಗ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಪಟ್ಟಾ ಭೂಮಿ ಖರೀದಿಗೆ ಜಮೀನು ಗುರುತಿಸಲಾಗಿದ್ದು, 24 ಗಂಟೆಗಳಲ್ಲಿ ಜಿಲ್ಲಾಧಿಕಾರಿಗಳು ಭೂಮಿ ಖರೀದಿಗೆ ಪ್ರಕ್ರಿಯೆ ಆರಂಭಿಸಿ, ತತ್ ಕ್ಷಣವೇ ಈ ಭೂಮಿಯನ್ನು ಸ್ಮಶಾನಕ್ಕಾಗಿ ಹದ್ದುಬಸ್ತು ಮಾಡಿ ಹಸ್ತಾಂತರ ಮಾಡಬೇಕು ಎಂದು ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.

ಈ ಗ್ರಾಮದಲ್ಲಿ ಸ್ಮಶಾಣಕ್ಕೆ ಜಾಗ ಇಲ್ಲ ಎಂಬುದು ಕಳೆದ ಕೆಲವು ತಿಂಗಳ ಹಿಂದೆ ತಮಗೆ ತಿಳಿದ ಕೂಡಲೇ, ತಹಶೀಲ್ದಾರರಿಗೆ ಸರ್ಕಾರಿ ಭೂಮಿ ಗುರುತಿಸಲು ತಾವು ಸೂಚನೆ ನೀಡಿದಾಗ, ಗ್ರಾಮದಲ್ಲಿ ಸರ್ಕಾರಿ ಜಮೀನು ಲಭ್ಯವಿಲ್ಲ ಎಂದು ತಿಳಿಸಿದಾಗ, ಪಟ್ಟಾ ಜಮೀನು ಖರೀದಿಸಲು ತಾವು ಸೂಚಿಸಿದ ಬಳಿಕ ಭಾಲ್ಕಿ ತಹಶೀಲ್ದಾರರು ಗ್ರಾಮದ ಜನರು ಯಾರೂ ಜಮೀನು ಮಾರಾಟ ಮಾಡಲು ಸಿದ್ಧರಿಲ್ಲ ಎಂದು ತಿಳಿಸಿದರು.

ಆಗ ನಾನೇ ಅದೇ ಗ್ರಾಮದ ಮಿತ್ರರಾದ ಶಿವರಾಜ್ ಹಾಸನ್ಕರ್ ಮತ್ತು ಇದರರಿಗೆ ಈ ಜವಾಬ್ದಾರಿ ವಹಿಸಿ, ಜಮೀನು ಖರೀದಿಗೆ ಜನರ ಮನವೊಲಿಸಲು ಸೂಚಿಸಿದ ತರುವಾಯ ಅವರು ಕಳೆದ 2022ರ ಮಾರ್ಚ್ 8ರಂದು ಬಸವರಾಜ್ ಎಂಬುವವರು 2 ಎಕರೆ 37 ಗುಂಟೆ ಪಟ್ಟಾ ಭೂಮಿಯನ್ನು ಸಾರ್ವಜನಿಕ ಸ್ಮಶಾಣಕ್ಕಾಗಿ ಮಾರಾಟ ಮಾಡಲು ಸಮ್ಮತಿಸಿರುತ್ತಾರೆ. ಈ ಪ್ರಸ್ತಾವನೆ ತಹಶೀಲ್ದಾರರಿಗೆ ಸಲ್ಲಿಕೆಯಾಗಿದೆ. ಆದರೂ ಸರ್ಕಾರ ತೀವ್ರ ವಿಳಂಬ ಮಾಡಿದೆ. ಇದು ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ. ಈಗ ದಿನಾಂಕ 16.08.22ರಂದು ಜಿಲ್ಲಾಧಿಕಾರಿಯವರಿಗೆ ತಹಶೀಲ್ದಾರರು ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಸರ್ಕಾರಕ್ಕೆ ಬಡ ಜನರ, ದಲಿತರ, ಗ್ರಾಮಸ್ಥರ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಈಶ್ವರ ಖಂಡ್ರೆ ಕೂಡಲೇ ಜಿಲ್ಲಾಧಿಕಾರಿಗಳು ಈ ಭೂಮಿ ಖರೀದಿಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ. (ಪ್ರಸ್ತಾವನೆ ಪ್ರತಿ ಲಗತ್ತಿಸಲಾಗಿದೆ)

ಸರ್ಕಾರದ ಬಳಿ ಸ್ಮಶಾಣ ಭೂಮಿ ಖರೀದಿಸಲೂ ಹಣ ಇಲ್ಲದಿದ್ದರೆ ಬಹಿರಂಗವಾಗಿ ಹೇಳಲಿ, ಶಾಸಕರಾಗಿ ತಾವು ಅಧಿವೇಶನದ ಬಳಿಕ ವೈಯಕ್ತಿಕ ದೇಣಿಗೆ ನೀಡಿ, ಜನರಿಂದ ದೇಣಿಗೆ ಸಂಗ್ರಹಿಸಿ ಭೂಮಿ ಖರೀದಿಸಿ ಸ್ಮಶಾನ ಭೂಮಿ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದ್ದಾರೆ.

ಬಿಜೆಪಿ ಸರ್ಕಾರದಲ್ಲಿ ಮಾನವೀಯತೆ ಇಲ್ಲವಾಗಿದೆ. ಗಂಭೀರ, ತುರ್ತು ವಿಷಯಗಳಿಗೂ ತತ್ ಕ್ಷಣ ಸ್ಪಂದಿಸದಿರುವುದು ಈ ಲೋಪಕ್ಕೆ ಕಾರಣವಾಗಿದೆ. ಜನರ ಸಂಕಷ್ಟ ಅರಿತು ಕಾಲ ಕಾಲಕ್ಕೆ ಕ್ಷೇತ್ರದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ದೊರಕಿಸಲು ನಾನು ಸತತ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಸರ್ಕಾರ ಸ್ಪಂದಿಸಬೇಕು ಅಷ್ಟೆ ಎಂದು ತಿಳಿಸಿದ್ದಾರೆ.