ಧನಾತ್ಮಕ ಚಿಂತನೆಯಿಂದ ಉತ್ತಮ ಸಾಧನೆ


 ಚಿತ್ರದುರ್ಗ. ನ.೨೧; ಮನುಷ್ಯ ನಕಾರಾತ್ಮಕ ಚಿಂತನೆಗಳಿಂದ ಹೊರ ಬಂದು ಧನಾತ್ಮಕ ಚಿಂತನೆಗಳನ್ನು ರೂಢಿಸಿಕೊಂಡಾಗ ಉತ್ತಮ ಸಾಧನೆ ಮಾಡಲು ಸಹಾಯಕವಾಗುವುದು, ಉತ್ತಮ ನಾಗರಿಕರಾಗಿ, ಉತ್ತಮ ಸಮಾಜ ಸೇವೆ ಮಾಡಲು ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು, ನಿಸ್ವಾರ್ಥತೆಯಿಂದ ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದು ಆವರ್ತ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನ ಗಣಿತ ಮತ್ತು ವ್ಯಕ್ತಿತ್ವ ವಿಕಸನ ಉಪನ್ಯಾಸಕ ಮಾನವ ಕಂಪ್ಯೂಟರ್ ಬಸವರಾಜ್ ಶಂಕರ್ ಉಮ್ರಾಣಿ ತಿಳಿಸಿದರು. ಅವರು ನಗರದ ಬಳಿ ಇರುವ ವಿಶ್ವಮಾನವ ಸಾಂಸ್ಕೃತಿಕ ವಿದ್ಯಾಸಂಸ್ಥೆ ಸಿಬಾರ್ ಗುತ್ತಿನಾಡುನಲ್ಲಿ ರೋಟರಿ ಕ್ಲಬ್ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿದಸಿದ್ದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಮತ್ತು ವಿಶ್ವ ಶೌಚಾಲಯ ದಿನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ತನಗೆ ಗೊತ್ತಿರುವ ಜ್ಞಾನವನ್ನ ಇನ್ನಿತರರಿಗೆ ಹಂಚಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು, ಜ್ಞಾನವನ್ನ ಮುಚ್ಚಿಟ್ಟುಕೊಂಡಷ್ಟೂ ನಾಶವಾಗುವುದು, ನಮಗೆ ಪ್ರೀತಿಪಾತ್ರರಾದವರ ಫೋನ್ ನಂಬರನ್ನೂ ನೆನಪಿಟ್ಟುಕೊಳ್ಳುವಂತೆಯೇ ನಾವು ಇತರರ ಸಂಖ್ಯೆಗಳನ್ನು ನೆನಪಿನಲ್ಲಿಟ್ಟು ಕೊಳ್ಳಬಹುದು, ಅವುಗಳನ್ನ ಮರುನೆನಪು ಮಾಡಿಕೊಂಡಷ್ಟೂ ಮೆದುಳಿನಲ್ಲಿ ಸಂಗ್ರಹವಾಗುವುದು ಎಂದರು.ಎಲ್ಲರ ಮಿದುಳುಗಳು ಸಮವಾಗಿ ಸೃಷ್ಟಿಯಾಗಿರುತ್ತದೆ, ಆದರೆ ಅವುಗಳನ್ನು ನಾವು ಸರಿಯಾದ ರೀತಿಯಲ್ಲಿ ಕೇಂದ್ರೀಕರಿಸುವಂತೆ ನಾವು ನಿಗ್ರಹಿಸುವ ಶಕ್ತಿಯನ್ನು ಸಂಪಾದಿಸಿಕೊಳ್ಳಬೇಕು, ಏಕಾಗ್ರತೆಯನ್ನು ಸಾಧಿಸಲು ಧ್ಯಾನ, ಯೋಗ, ವ್ಯಾಯಾಮ, ಉತ್ತಮ ಆಹಾರ, ಅಭ್ಯಾಸಗಳನ್ನ ಇಟ್ಟುಕೊಳ್ಳಬೇಕು. ಅವಶ್ಯಕತೆ ಇದ್ದಷ್ಟೇ ಮಾತ್ರ ನಾವು ದೂರದರ್ಶನ, ಮೊಬೈಲ್‌ಗಳನ್ನ ಉಪಯೋಗಿಸಕೊಳ್ಳಬೇಕು, ಅವುಗಳ ದಾಸರಾಗಬಾರದು ಎಂದರು.ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸದಸ್ಯರಾದ ಲಿಟರಸಿ ಚೇರ್ಮನ್ ರೋ. ಪಿಎಚ್‌ಎಫ್‌ಎಸ್. ವೀರೇಶ್, ರೋ. ಟಿ. ವಿ. ಸ್ವಾಮಿ, ಟಿ. ವೀರಭದ್ರಸ್ವಾಮಿ, ಎಂ. ಸಿ. ವೆಂಕಟೇಶ್, ಕೆಜೆವಿಎಸ್ ಜಿಲ್ಲಾಧ್ಯಕ್ಷರಾದ ರೋ. ಡಾ. ಎಚ್. ಕೆ. ಎಸ್. ಸ್ವಾಮಿ, ಕಾರ್ಯದರ್ಶಿ ನೀಲಕಂಠ ದೇವರು, ಮುಖ್ಯಶಿಕ್ಷಕರಾದ ಜಿ.ಆರ್ ಚನ್ನಬಸಪ್ಪ, ಶಿಕ್ಷಕರಾದ ಸಂಜೀವ್, ಕುಮಾರ್, ಪಾಪಣ್ಣ, ಅಮೃತ್, ವಿಜಯ್ ಇದ್ದರು. ರಂಜಿತಾ ಪ್ರಾರ್ಥಿಸಿದರು.