ಧನಾತ್ಮಕ ಚಿಂತನೆಯಿಂದ ಆತ್ಮಶಕ್ತಿ ಜಾಗೃತ: ಡಾ. ಚಿಮಕೋಡ

ಬೀದರ್: ಎ.10:ಧನಾತ್ಮಕ ಚಿಂತನೆಯಿಂದ ಮನುಷ್ಯರಲ್ಲಿ ಆತ್ಮಶಕ್ತಿ ಜಾಗೃತಗೊಳ್ಳುತ್ತದೆ ಎಂದು ಅಮೇರಿಕಾ ಅಂತರಾಷ್ಟ್ರೀಯ ಮಹಿಳಾ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ವಿಶ್ವನಾಥ ಚಿಮಕೋಡ ನುಡಿದರು.

ಶನಿವಾರ ನಗರದ ಶಿವನಗರ ಉತ್ತರದಲ್ಲಿರುವ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಇಂಟರ್‍ನ್ಯಾಶ್ನಲ್ ಹ್ಯುಮನ್ ಡೆವಲಪಮೆಂಟ್ ಯುನಿವರ್ಸಿಟಿ (ಯು.ಎಸ್.ಎ) ಕೊಡಮಾಡಿದ ಗೌರವ ಡಾಕ್ಟರೆಟ್‍ಗೆ ಭಾಜನರಾದ ಡಾ.ಮಂಗಲಾ ಪಾಟೀಲ ಹಾಗೂ ಮಹಾತ್ಮಾ ಗಾಂಧಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಪ್ರೊ.ಸೋಮನಾಥ ಪಾಟೀಲ ದಂಪತಿಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಮನುಷ್ಯ ಬೆಳಗ್ಗೆಯಿಂದ ಸಂಜೆ ವರೆಗೆ ದುಡ್ಡಿನ ಬೆನ್ನತ್ತಿ, ಸ್ವಾರ್ಥಕ್ಕಾಗಿ ಬಡಿದಾಡುತ್ತ ಪರೋಪಕಾರ, ಸಹಬಾಳ್ವೆ, ಸದಾಚಾರ, ಸಹೃದಯತೆ ಎಲ್ಲವನ್ನು ಮರೆತಿರುವನು. ಆದರೆ ಡಾ.ಮಂಗಲಾ ಸೋಮನಾಥ ದಂಪತಿಗಳು ಕೋವಿಡ್ ಸಂದರ್ಭದಲ್ಲೂ ಜೀವದ ಹಂಗು ತೊರೆದು ಮಾಡಿರುವ ಉಪಕಾರವೇ ಇಂದು ಅವರಿಗೆ ದೊರೆತ ಪ್ರಶಸ್ತಿಯೇ ನೈಜ ಸಾಕ್ಷಿ. ಹಾಗಾಗಿ ಅವರ ಆದರ್ಶತನ ಈ ಸಮಾಜದ ಪ್ರತಿಯೊಬ್ಬರ ಉಸಿರಾಗಲಿ ಎಂದರು.

ಭಾರತ ಒಂದು ಅಧ್ಯಾತ್ಮದ ತವರು. ಇಲ್ಲಿಯ ಸಂಸ್ಕøತಿ, ಕಲೆ, ಸಾಹಿತ್ಯ, ಪರೆಂಪರೆ, ಆಚಾರ-ವಿಚಾರಗಳನ್ನು ವಿಶ್ವಕ್ಕೆ ಪರಿಚಯಿಸಲು ನಾವೆಲ್ಲ ಮುಂದಾಗಬೇಕು. ಎಲ್ಲಕ್ಕೂ ಮಿಗಿಲಾಗಿ ಬಸವನ್ಣನವರ ಸಂದೇಶ ಹಾಗೂ ಅವರ ಸಮಾಕಾಲಿನ ಶರಣರ ವಚನಗಳನ್ನು ಜಗತ್ತಿಗೆ ಪ್ರಚುರಪಡಿಸುವ ಕಾರ್ಯ ನಿರಂತರವಾಗಿ ನಡೆಯಲಿ ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ ಬಸವ ಸೇವಾ ಪ್ರತಿಷ್ಟಾನದ ಪೂಜ್ಯ ಅಕ್ಕ ಡಾ.ಗಂಗಾಂಬಿಕೆ ಮಾತನಾಡಿ, ಶರಣರು ಹೇಳಿದಂತೆ ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ ಆದರೆ ಅವೆರಡರ ಮಧ್ಯದ ಜೀವನ ಯಾವತ್ತೂ ಕತ್ತಲೆ ಆಗಬಾರದೆಂದರೆ ನಮ್ಮ ಸಾಧನೆಯ ಹೆಜ್ಜೆ ಗುರುತು ಇಲ್ಲಿ ಬಿಟ್ಟು ಹೋಗಬೇಕು. ತನಗಾಗಿ ಬದುಕದೇ ಇತರರಿಗಾಗಿ ಬದುಕಿದರೆ ಅದು ಪರಮಾತ್ಮನಿಗೆ ಮಾಡುವ ಎರಡನೇ ಆರಾಧನೆ. ಇದರಿಂದ ನಮ್ಮಲ್ಲಿ ಚೈತನ್ಯ ಶಕ್ತಿ ಜಾಗೃತಗೊಂಡು ಆದರ್ಶ ವ್ಯಕ್ತಿಗಳಾಗಿ ಈ ಜಗತ್ತಿನಲ್ಲಿ ಗುರ್ತಿಸಲು ಸಾದ್ಯ. ಹಾಗೇ ಡಾ.ಮಂಗಲಾ ಸೋಮನಾಥ ದಂಪತಿಗಳು ಪಕ್ಕಾ ಬಸವ ನಿಷ್ಟರು. ಅವರ ಶರಣ ತತ್ವ ಪರಿಪಾಲನೆ ಅವರ ಕುಟುಂಬಕಷ್ಟೇ ಅಲ್ಲ ಇಡೀ ಮನುಕುಲಕ್ಕೆ ಮಾದರಿ ಎಂದು ಬಣ್ಣಿಸಿದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ.ಶಂಭೂಲಿಂಗ ಕಾಮಣ್ಣ ಮುಖ್ಯ ಅತಿಥಿಗಳಾಗಿ ಮಾತನಾಡಿ, ಈ ಧರೆ ಸಾಧನೆಯ ರಂಗಭೂಮಿ. ಒಬ್ಬ ದನ ಕಾಯುವ ಹುಡುಗ ಕಾಳಿದಾಸನಾದ, ಮೀನುಗಾರನ ಮಗ ಈ ದೇಶಕ್ಕೆ ರಾಷ್ಟ್ರಪತಿಯಾದರು. ರೈಲು ನಿಲ್ದಾಣದಲ್ಲಿ ಒಬ್ಬ ಚಹಾ ಮಾರುವವನ ಮಗ ಈ ದೇಶದ ಪ್ರಧಾನಿಯಾಗಿ ಜಗತ್ಪ್ರಸಿದ್ಧಿ ಪಡೆದಿರುವರು.. ಹೀಗೆ ಸಾಧನೆಗೆ ತ್ಯಾಗ, ತಪಸ್ಸು, ಶ್ರಮ ಮಾಡಿದಾಗ ಏನು ಬೇಕಾದರೂ ಸಾಧನೆ ಮಾಡಲು ಸಾಧ್ಯವಿದೆ ಎಂದರು.

ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ ಮಾತನಾಡಿ, ಡಾ.ಮಂಗಲಾ ಸೋಮನಾಥ ಪಾಟೀಲ ಇವರು ಶರಣ ಜೀವನ ಮೈಗೂಡಿಸಿಕೊಂಡು ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವರು. ಬಡವರಿಗಾಗಿ ಮಾಡಿದ ಸೇವೆ, ಧರ್ಮಕ್ಕಾಗಿ ದುಡಿದ ಅವರ ಕಾಣದ ಕೈಗಳು ಅವರನ್ನು ಇಂದು ಆದರ್ಶವಾಗಿಸಿವೆ. ಇವರ ಬದುಕು ಇತರರಿಗೆ ಹೀಗೆ ಮಾದರಿಯಾಗಲಿ ಎಂದು ಹರಸಿದರು.

ಅಕ್ಕಮಹಾದೇವಿ ಕಾಲೇಜಿನ ಬಿವೃತ್ತ ಪ್ರಾಚಾರ್ಯೆ ಪ್ರೊ.ಲೀಲಾವತಿ ಚಾಕೋತೆ, ಅಕ್ಕಮಹಾದೇವಿ ಕಾಲೇಜಿನ ಪ್ರಾಧ್ಯಾಪಕಿ ಡಾ.ವಜ್ರಾ ಪಾಟೀಲ ಮಾತನಾಡಿದರು. ಗುವಿವಿ ಮಾಜಿ ಸಿಂಡಿಕೇಟ್ ಸದಸ್ಯ ಶಾಂತಲಿಂಗ ಸಾವಳಗಿ ಅಧ್ಯಕ್ಷತೆ ವಹಿಸಿದರು. ಬಡಾವಣೆಯ ಹಿರಿಯ ಅಪ್ಪಾರಾವ ನವಾಡೆ, ಸಾಹಿತಿ ಜಗದೇವಿ ದುಬುಲಗುಂಡಿ ಹಾಗೂ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂತೋಷ ಹಡಪದ ವೇದಿಕೆಯಲ್ಲಿದ್ದರು,

ಈ ಸಂದರ್ಭದಲ್ಲಿ ಗೌರವ ಡಾಕ್ಟರೆಟ್ ಹಾಗೂ ಪ್ರಶಸ್ತಿಗೆ ಭಾಜನರಾದ ಡಾ.ಮಂಗಲಾ ಹಾಗೂ ಪ್ರೊ.ಸೋಮನಾಥ ದಂಪತಿಗಳನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಕಲಬುರಗಿಯ ಡಾ.ದೀಪಿಕಾ ಹಾಗೂ ಡಾ.ಬಸವರಾಜ ತೊಳನೂರ ದಂಪತಿಗಳು ಕಾರ್ಯಕ್ರಮ ಸಂಘಟಿಸಿದರು.

ಆರಂಭದಲ್ಲಿ ವೀರಣ್ಣ ಕುಂಬಾರ ವಚನ ಗಾಯನ ನಡೆಸಿಕೊಟ್ಟರು. ಡಾ.ಸುನಿತಾ ಕೂಡ್ಲಿಕರ್ ಸ್ವಾಗತಿಸಿದರು. ಡಾ.ಸುರೇಖಾ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು.