ಧನಾತ್ಮಕ ಆಲೋಚನೆಯು ಯಶಸ್ಸಿಗೆ ದಾರಿ

ಶಿವಮೊಗ್ಗ: ಧನಾತ್ಮಕ ಆಲೋಚನೆ ನಮ್ಮಲ್ಲಿ ಬೆಳೆಯುವಲ್ಲಿ ಹಾಗೂ ಜೀವನವು ಸಾಧನೆಯ ಮಾರ್ಗದಲ್ಲಿ ಮುನ್ನಡೆಯಲು ಜೆಸಿಐ ಸಹಕಾರಿ ಆಗುತ್ತದೆ ಎಂದು ಸರ್ಜಿ ಸಮೂಹ ಸಂಸ್ಥೆ ಅಧ್ಯಕ್ಷ ಡಾ. ಧನಂಜಯ ಸರ್ಜಿ ಹೇಳಿದರು.ಶಿವಮೊಗ್ಗ ನಗರದ ಸಾಯಿ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ ಆಯೋಜಿಸಿದ್ದ 2023ನೇ ಸಾಲಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಜೆಸಿಐ ನಂತಹ ಸಂಸ್ಥೆಗಳಲ್ಲಿ ನಿರಂತರ ಭಾಗವಹಿಸುವುದರಿಂದ ಸ್ವಯಂ ವ್ಯಕ್ತಿತ್ವ ವಿಕಸನ ಸಾಧ್ಯ. ನಿರಂತರ ಪರಿಶ್ರಮದ ಮೂಲಕ ಜೀವನದಲ್ಲಿ ಸಾಧಿಸಲು ಪ್ರೇರಣೆ ದೊರೆಯುತ್ತದೆ. ಉತ್ತಮ ಸಂವಹನದ ಕೌಶಲ್ಯದ ಜತೆಯಲ್ಲಿ ನಾಯಕತ್ವ ಗುಣ ಬೆಳೆಯಲು ಕಾರಣವಾಗುತ್ತದೆ. ಮಾನವೀಯ ಸೇವೆಯ ಮೌಲ್ಯದ ಅರಿವು ಮೂಡಿಸುತ್ತದೆ ಎಂದು ತಿಳಿಸಿದರು.ಜೆಸಿಐ ಶಿವಮೊಗ್ಗ ಸಹ್ಯಾದ್ರಿಯ ಅಧ್ಯಕ್ಷರಾಗಿ ಸತೀಶ್ ಚಂದ್ರ ಅವರು ಒಂದು ವರ್ಷದ ಅವಧಿಯಲ್ಲಿ ಉತ್ತಮವಾಗಿ ಮಾಡಿದ ಕೆಲಸಗಳು ಎಲ್ಲರಿಗೂ ಸ್ಫೂರ್ತಿ. ಮುಂದಿನ ವರ್ಷದಲ್ಲಿ ಕಾರ್ಯ ನಿರ್ವಹಿಸಲಿರುವ ಹೊಸ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಜೆಸಿಐ ಸಂಸ್ಥೆಗೆ ಸೇರಿದ ಎಲ್ಲರಿಗೂ ಶುಭವಾಗಲಿ ಎಂದು ಆಶಿಸಿದರು.ಜೆಸಿಐ ಸೆನೆಟರ್, ನಿಕಟಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ಹಳ್ಳಿಯಲ್ಲಿ ಬೆಳೆದ ನನಗೆ ಜೀವನವನ್ನು ಉತ್ತಮ ಮಾರ್ಗದಲ್ಲಿ ಮುನ್ನಡೆಸಲು ಹಾಗೂ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಜೆಸಿಐ ಸಂಸ್ಥೆಯಲ್ಲಿನ ನಿರಂತರ ಪಾಲ್ಗೊಳ್ಳುವಿಕೆ ಸಹಕಾರಿಯಾಯಿತು ಎಂದು ಹೇಳಿದರು.