ಸಿಂಧನೂರು.ಅ.೨೬- ದಲಿತ ಸಾಹಿತ್ಯ ಪರಿಷತ್ ತಾಲೂಕ ಘಟಕ ಹಾಗೂ ಯುವ ಘಟಕದ ಪದಾಧಿಕಾರಿಗಳ ಪದಗ್ರಹಣ ಮತ್ತು ಜಿಲ್ಲಾ ಮಟ್ಟದ ಕವಿ ಗೋಷ್ಠಿ ಜೊತೆಗೆ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪದ್ಮವಿಭೂಷಣ ಪ್ರಶಸ್ತಿ ವಿಜೇತರಾದ ಶ್ರೀ ಮಾತಾ ಬಿ. ಮಂಜಮ್ಮ ಜೋಗತಿಯವರ ಜೀವನಾಧಾರಿತ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಖಾಜಾಣ ನಾಟಕ ಸಂಸ್ಥೆಯಿಂದ ಅಕ್ಟೋಬರ್ ೩೧ ರಂದು ಸಿಂದನೂರಿನ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಘಟಕದ ಅಧ್ಯಕ್ಷ ಡಾ. ಹುಸೇನಪ್ಪ ಅಮರಾಪುರು ಹೇಳಿದರು.
ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ರಾಜ್ಯದಲ್ಲಿ ಕಳೆದ ಮೂವತ್ತು ವರ್ಷಗಳಿಂದಲೂ ದಲಿತ ಸಾಹಿತ್ಯ ಪರಿಷತ್ ಈ ಸಮಾಜದಲ್ಲಿ ಸಾಮಾಜಿಕವಾಗಿ ಧ್ವನಿಯಿಲ್ಲದವರಿಗೆ ಧ್ವನಿಯಾಗಿ ಶೋಷಿತರ ವರ್ಗಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಹೆಮ್ಮರವಾಗಿ ಬೆಳೆದು ಬಂದಿದೆ. ಎಪ್ಪತ್ತರ ದಶಕದಲ್ಲಿ ದಲಿತ ಸಂಘರ್ಷ ಸಮಿತಿಯು ದಲಿತ ಚಳುವಳಿಗಳ ಮೂಲಕ ಸಾಮಾಜಿಕ ಜಾಗೃತಿಯನ್ನುಂಟು ಮಾಡುತ್ತಿದೆ.೧೯೯೪ ರಲ್ಲಿ ದಲಿತ ಸಾಹಿತ್ಯ ಪರಿಷತ್ ರಾಜ್ಯದಲ್ಲಿ ಉದಯವಾಯಿತು. ನಾಡಿನ ಹಿರಿಯ ದಲಿತ ಸಾಹಿತಿಗಳು , ಪ್ರಗತಿಪರ ಚಿಂತಕರು , ಬಂಡಾಯ ಬರಹಗಾರರನ್ನೊಳಗೊಂಡ ತಂಡ ಇದಾಗಿದೆ. ಇವತ್ತು ದಲಿತ ಸಾಹಿತ್ಯ ಪರಿಷತ್ ಜಿಲ್ಲೆಯಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಮನೆ ಮನೆಗೆ ಮಹಾನಾಯಕ ಸೇರಿದಂತೆ ಇನ್ನಿತರ ಕಾರ್ಯಗಳನ್ನು ಮಾಡುವಲ್ಲಿ ಯಶಸ್ವಿಗೊಳಿಸಲಾಗಿದೆ ಎಂದರು.
ನಂತರ ಪರಿಷತ್ ಗೌರವ ಸಲಹೆಗಾರರಾದ ಡಿ. ಹೆಚ್. ಕಂಬಳಿ ಮಾತನಾಡಿ ದಲಿತ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲಾ ಮತ್ತು ತಾಲ್ಲೂಕಿನಲ್ಲಿ ಅನೇಕ ಸಮಾಜಮುಖಿಯಾಗಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಸಾಗಿ ಬಂದಿರುವ ಹಾದಿ ಅಮೋಘವಾಗಿದೆ. ತಾಲ್ಲೂಕಿನಾದ್ಯಾಂತ ‘ಮನೆ ಮನೆಗೆ ಮಹಾನಾಯಕ’ ಅರಿವಿನಡಿಗೆ ಕಾಲೇಜ್ ಕಡೆಗೆ ಕಾರ್ಯಕ್ರಮಗಳು ಪ್ರಾಮುಖ್ಯತೆ ಪಡೆದುಕೊಂಡು ಸಾಮಾಜಿಕ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಸಂಶೆಗೆ ಪಾತ್ರವಾಗಿದ್ದು ವಿಶೇಷವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪರಿಷತ್ತಿನ ಹಿರಿಯರಾದ ಡಾ.ಅರುಣಕುಮಾರ ಬೇರಿಗಿ, ನಾರಾಯಣಪ್ಪ ಮಾಡಶಿರಿವಾರ, ಹೋಳಿಯಪ್ಪ ದಿದ್ದಿಗಿ,ಪತ್ರಕರ್ತ ನಾಗರಾಜ ಬೊಮ್ಮನಾಳ, ತಿಮ್ಮಣ್ಣ ಕಲಮಂಗಿ, ವಿರೇಶ ನಾಯಕ ಕನ್ನಾರಿ, ಡಾ.ರಾಮಣ್ಣ ಹಿರೇ ಬೇರಿಗಿ, ಜಯಪ್ಪ ಗೊರೇಬಾಳ, ಶಿವರಾಜ ಕುರುಕುಂದ, ಯಂಕೋಬ ಭೂತಲದಿನ್ನಿ, ದುಗ್ಗಪ್ಪ ಮಲ್ಲಾಪುರು ಸೇರಿದಂತೆ ಇತರರು ಇದ್ದರು.