`ದ ಜಡ್ಜ್ ಮೆಂಟ್’ ಆರಂಭ

ಕ್ರೇಜಿಸ್ಟಾರ್ ರವಿಚಂದ್ರನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ “ದ ಜಡ್ಜ್ ಮೆಂಟ್” ಚಿತ್ರೀಕರಣ ಆರಂಭವಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಯಲಿದೆ.

ಗುರುರಾಜ್ ಕುಲಕರ್ಣಿ ನಿರ್ದೇಶಿಸಿ ನಿರ್ಮಾಣ ಮಾಡುತ್ತಿರುವ ಚಿತ್ರದಲ್ಲಿ ರವಿಚಂದ್ರನ್ ಜೊತೆಗೆ ಮುಖ್ಯ ಪಾತ್ರದಲ್ಲಿ ನಟಿ ಮೇಘನಾ ಗಾಂವಕರ್, ದಿಗಂತ್, ಧನ್ಯ ರಾಮಕುಮಾರ್, ಲಕ್ಷ್ಮೀಗೋಪಾಲಸ್ವಾಮಿ, ಟಿ.ಎಸ್.ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರೂಪ ರಾಯಪ್ಪ, ರಾಜೇಂದ್ರ ಕಾರಂತ್ ಹೀಗೆ ಬಹುದೊಡ್ಡ ತಾರಾಬಳಗವಿದೆ.

ಈ ವೇಳೆ ಮಾತಿಗಿಳಿದ ನಟ ರವಿಚಂದ್ರನ್, “ಆಕ್ಸಿಡೆಂಟ್” ಮಾಡಿ “ಲಾಸ್ಟ್ ಬಸ್” ಹತ್ತಿ “ಅಮೃತ ಅಪಾರ್ಟ್‍ಮೆಂಟ್ಸ್” ಗೆ ಹೋಗಿ ಈಗ “ಜಡ್ಜ್ ಮೆಂಟ್” ನೀಡಲು ಗುರುರಾಜ್ ಬಂದಿದ್ದಾರೆ.  ಕಥೆ ಚೆನ್ನಾಗಿದೆ.ತಂಡ ಹಾಗೂ ಜಾನರ್ ಎರಡು ಹೊಸತು. ಆರು ಜನ ಸ್ನೇಹಿತರು ಸೇರಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ ಒಳ್ಳೆಯದಾಗಲಿ ಎಂದರು.

ನಟಿ ಮೇಘನಾ ಗಾಂವಕರ್,ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದೇನೆ. ರವಿಚಂದ್ರನ್ ಸಾರ್ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಕೊಟ್ಟಿದೆ. ಇನ್ನು ಕರ್ವ-3 ಚಿತ್ರ ಜೂನ್ ಅಥವಾ ಜುಲೈನಲ್ಲಿ ಆರಂಭವಾಗಲಿದೆ ಎನ್ನುವ ಮಾಹಿತಿ ಹಂಚಿಕೊಂಡರು.

ಹಿರಿಯ ನಿರ್ದೇಶಕ ನಾಗಾಭರಣ ಮಾತನಾಡಿ, ನಾವೆಲ್ಲ ಸದ್ಯದಲ್ಲೇ ರಾಜ್ಯದಲ್ಲಿ ಮತ್ತೊಂದು “ಜಡ್ಜ್ ಮೆಂಟ್” ಗಾಗಿ ಕಾಯುತ್ತಿದ್ದೇವೆ. ಅಷ್ಟರಲ್ಲಿ ಗುರುರಾಜ್ ಕುಲಕರ್ಣಿ ಮತ್ತು ತಂಡದವರ “ದ ಜಡ್ಜ್ ಮೆಂಟ್” ಶುರುವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು.

ದಿಗಂತ್, ಧನ್ಯ, ಲಕ್ಷ್ಮೀ ಗೋಪಾಲಸ್ವಾಮಿ, ರೂಪ ರಾಯಪ್ಪ ಮುಂತಾದವರು “ದ ಜಡ್ಜ್ ಮೆಂಟ್” ಕುರಿತು ಮಾತನಾಡಿದರು. ಶರದ್ ಬಿ ನಾಡಗೌಡ, ವಿಶ್ವನಾಥ ಗುಪ್ತ, ರಾಮು ರಾಯಚೂರು, ರಾಜಶೇಖರ ಆರ್ ಪಾಟೀಲ, ರಾಜೇಶ್ವರಿ ಆರ್ ಸುನೀಲ ಹಾಗೂ ಪ್ರತಿಮ ಬಿರಾದಾರ  ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ಶಿವು ಬಿ.ಕೆ.ಕುಮಾರ್ ಛಾಯಾಗ್ರಹಣವಿದೆ.