
ಮಂಗಳೂರು, ಎ.೧೪- ಈ ಬಾರಿ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಶತಸ್ಸಿದ್ಧ. ಮಂಗಳೂರು ಕ್ಷೇತ್ರವೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಎಂಟೂ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುವುದು ಖಚಿತ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಂಗಳೂರು ಕ್ಷೇತ್ರದ ಪ್ರಭಾರಿ ಪ್ರತಾಪ್ ಸಿಂಹ ನಾಯಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಮಂಗಳೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಬಿಜೆಪಿ ಈ ಬಾರಿ ಬಹಳಷ್ಟು ಹೊಸ ಮುಖಗಳಿಗೆ ಅವಕಾಶ ಮಾಡಿಕೊಟ್ಟಿದೆ. ಅಧಿಕಾರದಲ್ಲಿರುವ ಪಕ್ಷವೊಂದು ಹಾಲಿ ಶಾಸಕರ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಧೈರ್ಯ ತೋರಿರುವುದು ಶ್ಲಾಘನೀಯ ಎಂದು ಅವರು ನುಡಿದರು. ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ಮಾತನಾಡಿ, ಮಂಗಳೂರು ಕ್ಷೇತ್ರದ ಹಾಲಿ ಶಾಸಕ ಕಾಂಗ್ರೆಸ್‌ನ ಯು.ಟಿ ಖಾದರ್ ನಾಲ್ಕು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರೂ ಜನರ ಅಪೇಕ್ಷೆಯಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈ ಬಾರಿಯ ಚುನಾವಣೆಗಾಗಿ ಬಿಜೆಪಿ ಕಳೆದ ಐದು ವರ್ಷಗಳಿಂದಲೂ ಕ್ಷೇತ್ರದಲ್ಲಿ ಕೆಲಸ ಮಾಡುತ್ತಲೇ ಬಂದಿದೆ. ಹೀಗಾಗಿ ಜನರ ಮನಸ್ಸನ್ನು ಗೆದ್ದು, ಚುನಾವಣೆಯಲ್ಲಿ ಗೆಲ್ಲುವುದು ನಿಶ್ಚಿತ ಎಂದು ಹೇಳಿದರು. ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಮಾತನಾಡಿ, ಟಿಕೆಟ್ ಘೋಷಣೆಯಾಗುವವರೆಗೂ ತಾನು ಆಕಾಂಕ್ಷಿಯಾಗಿದ್ದುದು ನಿಜ. ಆದರೆ ಒಮ್ಮೆ ಪಕ್ಷದ ಹಿರಿಯರು ಅಭ್ಯರ್ಥಿಯನ್ನು ಘೋಷಣೆ ಮಾಡಿದ ಬಳಿಕ ಆ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುವುದು ನಮ್ಮ ಪರಂಪರೆ ಮತ್ತು ಬದ್ಧತೆ. ಹಾಗಾಗಿ ಸತೀಶ್ ಕುಂಪಲ ಅವರಿಗೆ ಪೂರ್ಣ ಸಹಕಾರ ಮತ್ತು ಬೆಂಬಲ ನೀಡಿ ಅವರ ಗೆಲುವಿಗಾಗಿ ಶ್ರಮಿಸುವುದಾಗಿ ನುಡಿದರು. ಸುದ್ದಿಗೋಷ್ಠಿಯಲ್ಲಿ ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್, ಜಿಲ್ಲಾ ವಕ್ತಾರರು ಹಾಗೂ ಮಂಗಳೂರು ವಿಭಾಗ ಮಾಧ್ಯಮ ಪ್ರಮುಖರಾದ ಜಗದೀಶ್ ಶೇಣವ, ಮಂಡಲ ಉಪಾಧ್ಯಕ್ಷ ಯಶವಂತ ಅಮೀನ್, ನಾಯಕರಾದ ಚಂದ್ರಹಾಸ ಉಳ್ಳಾಲ, ಚಂದ್ರಹಾಸ ಉಚ್ಚಿಲ್, ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ಉಪಸ್ಥಿತರಿದ್ದರು.