ದ.ಕ.ಜಿಲ್ಲೆಯಲ್ಲೂ ಅಪಾರ ಪ್ರಮಾಣದಆಸ್ತಿ-ಪಾಸ್ತಿಗೆ ಹಾನಿ

ಮಂಗಳೂರು, ಸೆ.೨೧- ದ.ಕ. ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ವರ್ಷಧಾರೆ ಮುಂದುವರಿದಿದೆ. ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಜಿಲ್ಲೆಯು ಅಕ್ಷರಶಃ ತತ್ತರಿಸಿದೆ. ಜಿಲ್ಲೆಯ ವಿವಿಧೆಡೆ ರಸ್ತೆ ಕಡಿತ, ಗುಡ್ಡ, ಬಂಡೆ ಕುಸಿತ, ಮನೆ-ತಡೆಗೋಡೆಗಳು, ಮರ-ಗಿಡಗಳು ಧರಾಶಾಹಿಯಾಗಿದ್ದು, ರವಿವಾರ ಜನಜೀವನ ಸಂಫೂರ್ಣ ಅಸ್ತವ್ಯಸ್ತಗೊಂಡಿತು. ಸೋಮವಾರ ಬೆಳಗ್ಗೆ ಮಳೆ ಕೊಂಚ ಕಡಿಮೆಯಾಗಿದೆ.
ಜಿಲ್ಲೆಯಾದ್ಯಂತ ಒಂಬತ್ತು ಮನೆಗಳು ಸಂಪೂರ್ಣ ಹಾನಿಯಾಗಿದ್ದು, ೧೬ ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಕಳೆದ ೨೪ ಗಂಟೆಯಲ್ಲಿ ವ್ಯಕ್ತಿ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ.
ಜಿಲ್ಲೆಯ ಪ್ರಮುಖ ನದಿಗಳು
ಕುಮಾರಧಾರ, ನೇತ್ರಾವತಿ, ಫಲ್ಗುಣಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಜಿಲ್ಲೆಯ ಹೊಲ-ಗದ್ದೆಗಳು ಮಳೆನೀರಿ
ನಿಂದ ಸಂಪೂರ್ಣ ಜಲಾವೃತಗೊಂಡಿವೆ.
ದ.ಕ. ಜಿಲ್ಲೆಯಲ್ಲಿ ವ್ಯಾಪಕಗೊಂಡಿರುವ ಮಳೆಗೆ ಜನತೆ ಸಮಸ್ಯೆಯ ಸುಳಿಗೆ ಸಿಕ್ಕಿಹಾಕಿಕೊಂಡಿದ್ದು, ಜಿಲ್ಲಾಡಳಿತದಿಂದ ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಮಂಗಳೂರು ತಾಲೂಕಿನಲ್ಲಿ ಮೂರು ಕಾಳಜಿ ಕೇಂದ್ರ ತೆರೆಯಲಾಗಿದೆ. ದ.ಕ. ಜಿಲ್ಲೆಯ ಜಿಪಂ ಬೋರ್ಡ್ ಶಾಲೆ ಕಾಶಿಮಠದಲ್ಲಿ ಏಳು ಜನ, ಮುಲ್ಕಿಯ ಕಿಲ್ಲಜಾರು ಗ್ರಾಮ ನಂದಗೋಕುಲ ಭವನದಲ್ಲಿ ೧೫ ಮಂದಿ, ಬಪ್ಪನಾಡು ಅನ್ನಪೂರ್ಣೇಶ್ವರಿ ಸಭಾಂಗಣದಲ್ಲಿ ೧೨ ಮಂದಿಗೆ ಆಶ್ರಯ ನೀಡಲಾಗಿದೆ. ಮಂಗಳೂರು ತಾಲೂಕು ಹೊರತುಪಡಿಸಿ ಜಿಲ್ಲೆಯ ಇನ್ನಿತರ ಯಾವುದೇ ತಾಲೂಕುಗಳಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿಲ್ಲ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಿಲ್ಲೆಯ ಉಳಿದ ಪ್ರದೇಶಗಳಿಗೆ ಹೋಲಿಸಿದರೆ ಮೂಲ್ಕಿ ಪ್ರದೇಶದಲ್ಲಿ ಶಾಂಭವಿ ನದಿ ನೀರಿನ ಮಟ್ಟ ಏರಿ ವ್ಯಾಪಕ ಪ್ರವಾಹ ಉಂಟಾಗಿದ್ದರಿಂದ ಎನ್‌ಡಿಆರ್‌ಎಫ್ ತಂಡದ ಸಹಕಾರದಲ್ಲಿ ಒಟ್ಟು ೨೭ ಮಂದಿಯನ್ನು ಎರಡು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಯಿತು. ಮೊದಲನೇ ಪುಟದಿಂದ…
ಮಲ್ಲೂರಿನಲ್ಲಿ ಗುಡ್ಡದ ಬಂಡೆಯೊಂದು ಕುಸಿಯುವ ಮುನ್ನೆಚ್ಚರಿಕೆಯಾಗಿ ೫ ಕುಟುಂಬಗಳ ಸ್ಥಳಾಂತರ ಮಾಡಲಾಗಿದೆ. ಎಕ್ಕೂರು, ಜಪ್ಪಿನ ಮೊಗರು ಪ್ರದೇಶದಲ್ಲಿ ಶನಿವಾರ ಸಾಕಷ್ಟು ಮಳೆ ನೀರಿನಿಂದ ಸಮಸ್ಯೆಯಾಗಿ ಅಲ್ಲಿನ ೧೫ಕ್ಕೂ ಹೆಚ್ಚಿನ ಮನೆಯವರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ ರವಿವಾರ ಮಳೆ ಪ್ರಮಾಣ ಇಳಿಕೆಯಾಗುತ್ತಿದ್ದಂತೆ ಅವರು ಮತ್ತೆ ಮನೆಗೆ ಮರಳಿದ್ದಾರೆ. ಮಂಗಳೂರು ತಾಲೂಕಿನ ನೀರುಮಾರ್ಗ ಕೆಲರಾಯಿ ರಸ್ತೆಯಲ್ಲಿ ಸುಮಾರು ಮೀಟರ್‌ಗಳಷ್ಟು ಉದ್ದಕ್ಕೆ ರಸ್ತೆಯೇ ಪ್ರಪಾತಕ್ಕೆ ಜರಿದು ಸಂಪೂರ್ಣವಾಗಿ ಸಂಪರ್ಕ ಕಡಿತವಾಗಿದ್ದು, ಸ್ಥಳೀಯರಿಗೆ ತೀವ್ರ ಅನನುಕೂಲವಾಗಿದೆ. ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಆದ್ಯಪಾಡಿ-ಏರ್‌ಪೋರ್ಟ್ ರಸ್ತೆಗೆ ಗುಡ್ಡದಿಂದ ಬೃಹತ್ ಮುರಬಂಡೆ ಹಾಗೂ ಭಾರೀ ಪ್ರಮಾಣದಲ್ಲಿ ಗುಡ್ಡದ ಮಣ್ಣು ಕುಸಿದು ಬಿದ್ದು ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಈ ಪ್ರದೇಶಕ್ಕೆ ಜಿಪಂ ಸದಸ್ಯ ಯು.ಪಿ. ಇಬ್ರಾಹೀಂ, ಪಂಚಾಯತ್ ಮಾಜಿ ಸದಸ್ಯ ಶಿವಶಂಕರ್, ಬಜ್ಪೆ ಗ್ರಾಪಂ ಮಾಜಿ ಅಧ್ಯಕ್ಷ ಸಾಹುಲ್ ಹಮೀದ್ ಮತ್ತಿತರರು ಭೇಟಿ ನೀಡಿ, ಸಂಬಂಧಿತ ಇಲಾಖೆಗಳಿಗೆ ಪರಿಸ್ಥಿತಿ ಬಗ್ಗೆ ವಿವರಿಸಿದರು. ಇದೇ ರೀತಿ ಬಜ್ಪೆ ಸಮೀಪದ ಕೊಂಚಾರು ಸೇತುವೆ ಸಮೀಪದಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಉಳ್ಳಾಲದ ಮಂಜನಾಡಿಯಲ್ಲಿ ಮನೆಯೊಂದು ಸಂಪೂರ್ಣ ಹಾನಿಯಾದರೆ, ಅಳಪೆಯಲ್ಲಿ ಗೋಡೆ ಕುಸಿತವಾಗಿ ಇಬ್ಬರು ಆಸ್ಪತ್ರೆಗೆ ದಾಖಲಾಗಿ ದ್ದಾರೆ. ಕದ್ರಿಯಲ್ಲಿ ಗೋಡೆ ಜರಿದುಬಿದ್ದು ಎರಡು ಮನೆಗಳಿಗೆ ಹಾನಿಯಾಗಿದೆ. ಹರೇಕಳದಲ್ಲಿ ತಡೆಗೋಡೆ ಕುಸಿದು ಮನೆಗೆ ಹಾನಿಯಾಗಿದೆ. ಅಳಪೆಯಲ್ಲಿ ದಾಮೋದರ್ ಎಂಬವರ ಮನೆ ಸಂಪೂರ್ಣ ಧರಾಶಾಹಿಯಾಗಿದೆ. ನಗರದ ಹೊರವಲಯದ ಸರಿಪಳ್ಳ ಎಂಬಲ್ಲಿ ಮನೆ ಮೇಲೆ ಗುಡ್ಡ ಕುಸಿದು ಹಾನಿ ಸಂಭವಿಸಿದೆ. ಕುಳಾಯಿ ಬಳಿಯೂ ಧರೆ ಕುಸಿದು ಮನೆ ಜಖಂಗೊಂಡಿದೆ. ಮಂಗಳೂರು ನಗರದ ಹೊರವಲಯದ ಗುರುಪುರ ವ್ಯಾಪ್ತಿ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಫಲ್ಗುಣಿ ನದಿ ಉಕ್ಕಿ ಹರಿಯುತ್ತಿದೆ. ಪ್ರವಾಹದಿಂದ ತಗ್ಗು ಪ್ರದೇಶದಲ್ಲಿ ಆತಂಕದ ಸ್ಥಿತಿ ಉಂಟಾಗಿದ್ದರೆ, ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳಂಬೆ ಗ್ರಾಮದ ಕೆಲವೆಡೆ ಗುಡ್ಡ ಕುಸಿತ, ಬಂಡೆ ಕುಸಿದು ರಸ್ತೆ ಸಂಚಾರ ಸ್ಥಗಿತ, ಆವರಣ ಗೋಡೆ ಕುಸಿದು ಮನೆಗಳಿಗೆ ಭಾರೀ ಅಪಾಯ ಸಂಭವಿಸಿದೆ.
ವಾಮಂಜೂರು ಸಮೀಪದ ಮೂಡುಶೆಡ್ಡೆ ಭಾಗದಲ್ಲಿ ಫಲ್ಗುಣಿ ನದಿ ತುಂಬಿ ಹರಿಯುತ್ತಿದೆ. ಭಾರೀ ಮಳೆಯಿಂದಾಗಿ ಅಧಿಕ ಪ್ರಮಾಣದ ಭತ್ತದ ಬೆಳೆ ಮುಳುಗಡೆಯಾಗಿದೆ. ಕೃಷಿಕ ರಮಾನಾಥ ಎಂಬವರು ಐದು ಎಕರೆ ಗದ್ದೆಯಲ್ಲಿ ಬೆಳೆದ ಭತ್ತದ ಕೃಷಿ ಪ್ರವಾಹ ದಿಂದ ಸಂಪೂರ್ಣ ಜಲಾವೃತವಾಗಿದೆ. ಪರಿಣಾಮ ಲಕ್ಷಾಂತರ ರೂ. ವೌಲ್ಯದ ಬೆಳೆ ನೀರುಪಾಲಾಗಿದೆ. ಗುರುಪುರ ಕುಕ್ಕುದಕಟ್ಟೆಯಲ್ಲಿ ಭತ್ತದ ನೇಜಿ ಪ್ರವಾಹದಲ್ಲಿ ಹರಿದು ಹೋಗಿದ್ದು, ಕೆಲವರು ಈಜಿ ಒಂದಷ್ಟು ನೇಜಿ ಹಿಡಿದಿದ್ದಾರೆ. ಇಲ್ಲಿನ ತಗ್ಗುಪ್ರದೇಶದಲ್ಲೂ ಪ್ರವಾಹ ಭೀತಿ ಉಂಟಾಗಿದೆ. ಮರವೂರು ಅಣೆಕಟ್ಟು ಸುತ್ತಲಿನ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದ್ದು, ಕೃಷಿ ಬೆಳೆಗೆ ಹಾನಿಯಾಗಿದೆ. ಮೂಲ್ಕಿಯ ಕಿನ್ನಿಗೋಳಿ, ಕಿಲೆಂಜೂರು, ಪಂಜ, ಬಳ್ಕುಂಜೆ, ಅತ್ತೂರು ಪ್ರದೇಶದಲ್ಲಿ ನೂರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿ ಭಾರೀ ಹಾನಿಯಾಗಿದೆ. ಸೂರಿಂಜೆ, ಚೇಳ್ಯಾರು ಪ್ರದೇಶದಲ್ಲೂ ಬತ್ತದ ಗದ್ದೆಗಳಲ್ಲಿ ಮಳೆ ನೀರು ನಿಂತು ನಷ್ಟ ಸಂಭವಿಸಿದೆ. ಕಾಸರಗೋಡಿನ ಇತಿಹಾಸ ಪ್ರಸಿದ್ಧ ಮಧೂರು ಮಹಾಗಣಪತಿ ದೇವಾಲಯ ಜಲಾವೃತವಾಗಿದ್ದರೆ, ಬಪ್ಪನಾಡು, ಶಿಮಂತೂರು ದೇವಾಲಯಗಳು ಕೂಡ
ಈ ಮಳೆಗಾಲದಲ್ಲಿ ೨ನೇ ಬಾರಿಗೆ ಜಲಾವೃತವಾದವು.
ನೀರುಮಾರ್ಗದಲ್ಲಿ ಗುಡ್ಡ ಕುಸಿತ
ಮಂಗಳೂರು, ಸೆ.೨೧- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಹಲವೆಡೆ ಗುಡ್ಡ ಕುಸಿತವುಂಟಾಗಿದ್ದು, ಆಸ್ತಿಪಾಸ್ತಿ ಹಾನಿಯುಂಟಾಗಿದೆ. ನೀರುಮಾರ್ಗದಲ್ಲಿ ಗುಡ್ಡ ಕುಸಿತದಿಂದಾಗಿ ಕಾಂಕ್ರಿಟ್ ರಸ್ತೆ ಕುಸಿದಿದ್ದು, ಸಂಪರ್ಕ ಕಡಿತಗೊಂಡಿದೆ. ನಾಗರಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಂಕ್ರಿಟ್ ರಸ್ತೆ ಮಧ್ಯೆ ಭಾಗವೇ ಧರಶಾಹಿಯಾಗಿದೆ. ಕೆಲ್ರಾಯಿಯಿಂದ ಬಿತ್ತುಪಾದೆ ಸಂಪರ್ಕಿಸುವ ರಸ್ತೆಯಲ್ಲಿ ಗುಡ್ಡ ಕುಸಿತದಿಂದ ಈ ಅವಘಡ ಸಂಭವಿಸಿದೆ. ಮುಂಜಾನೆಯಿಂದಲೇ ಸುರಿದ ಭಾರೀ ಮಳೆಗೆ ರಸ್ತೆ ಕುಸಿತಗೊಂಡಿದೆ. ಇನ್ನು ರಸ್ತೆ ಕುಸಿತದಿಂದಾಗಿ ಎರಡು ಪ್ರದೇಶಗಳ ಸಂಪರ್ಕ ಕಡಿತಗೊಂಡಿದೆ. ಸ್ಥಳಕ್ಕೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ್, ಮಾಜಿ ಶಾಸಕ ಮೊಯ್ದಿನ್ ಬಾವಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.