ದ.ಕ. ಜಿಲ್ಲೆಯಲ್ಲಿ ೨೨೭೫ ಸಕ್ರಿಯ ಕೊರೊನಾ ಪ್ರಕರಣ: ಜಿಲ್ಲಾಧಿಕಾರಿ

ಮಂಗಳೂರು, ಎ.೨೨- ದ.ಕ. ಜಿಲ್ಲೆಯಲ್ಲಿ ಇಂದಿನವರೆಗೆ ೨೨೭೫ ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಇವರಲ್ಲಿ ೪೮೨ ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಹಾಗೂ ೧೭೯೩ ಮಂದಿ ಹೋಂ ಐಸೋಲೇಶನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ದ.ಕ. ಜಿಲ್ಲಾಸ್ಪತ್ರೆಯಾದ ವೆನ್‌ಲಾಕ್‌ನಲ್ಲಿ ೭೫ ವೆಂಟಿಲೇಟರ್‌ಗಳು ಲಭ್ಯವಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ೫೦ ವೆಂಟಿಲೇಟರ್‌ಗಳ ಲಭ್ಯತೆ ಇದೆ. ಜಿಲ್ಲೆಯ ೩೧ ಪ್ರಮುಖ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಅಗತ್ಯ ಬೆಡ್‌ಗಳು, ಆಕ್ಸಿಜನ್ ವ್ಯವಸ್ಥೆ ಇದೆ. ವೆನ್‌ಲಾಕ್ ಆಸ್ಪತ್ರೆಯಲ್ಲಿರುವ ವೆಂಟಿಲೇಟರ್‌ಗಳನ್ನು ನಿರ್ವಹಿಸಲು ಸಿಬ್ಬಂದಿ ಹಾಗೂ ವೈದ್ಯರ ಕೊರತೆಯ ಹಿನ್ನೆಲೆಯಲ್ಲಿ ಐದು ವೆಂಟಿಲೇಟರ್‌ಗಳನ್ನು ಕೆಎಸ್ ಹೆಗ್ಡೆ ಆಸ್ಪತ್ರೆ ಹಾಗೂ ೨ ವೆಂಟಿಲೇಟರ್‌ಗಳನ್ನು ಕಣಚೂರು ಆಸ್ಪತ್ರೆಗೆ ಒದಗಿಸಲಾಗಿದೆ. ವೆನ್‌ಲಾಕ್‌ನ ಮೆಡಿಕಲ್ ಬ್ಲಾಕ್ ಕೋವಿಡ್ ಆಸ್ಪತ್ರೆಯಾಗಿ ಇಲ್ಲಿನ ೨೫೦ ಬೆಡ್‌ಗಳನ್ನು ಉಪಯೋಗಿಸಲಾಗುತ್ತಿದೆ. ೧೫೦ಕ್ಕೂ ಅಧಿಕ ಆಕ್ಸಿಜನ್ ಕಿಟ್‌ಗಳು ಲಭ್ಯವಿದ್ದು, ಅಗತ್ಯ ಆಕ್ಸಿಜನ್ ಪೂರೈಕೆದಾರರಿಂದ ಅಗತ್ಯಬಿದ್ದಲ್ಲಿ ತರಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ರೋಗಿಗಳಿಗೆ ಆಯುಷ್ಮಾನ್‌ನಡಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇದಕ್ಕಾಗಿ ೨೫ ಮಂದಿ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಹಗಲು ಹೊತ್ತು ಆರೋಗ್ಯ ಮಿತ್ರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಇವರ ಸೇವೆಯನ್ನು ರಾತ್ರಿ ವೇಳೆಗೂ ವಿಸ್ತರಿಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ವಿವರಿಸಿದರು. ಪ್ರಸ್ತುತ ವರದಿಯಾಗುವ ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಶೇ. ೯೦ರಷ್ಟು ಪ್ರಕರಣಗಳು ಬಂಟ್ವಾಳ ಹಾಗೂ ಮಂಗಳೂರು ಪ್ರದೇಶಕ್ಕೆ ಸೀಮಿತವಾಗಿದೆ. ಅದರಲ್ಲೂ ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ಶೇ. ೯೦ರಷ್ಟು ಪ್ರಕರಣಗಳು ವರದಿಯಾಗುತ್ತಿದ್ದು, ನಗರದ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ ಡ್ಯಾಶ್‌ಬೋರ್ಡ್ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿ, ಆ ಪ್ರದೇಶಗಳಲ್ಲಿ ಸಾರ್ವಜನಿಕರ ಹೆಚ್ಚಿನ ಸಂಚಾರ ತಡೆಗೆ ಕ್ರಮ ವಹಿಸಲಾಗುವುದು. ಒಂದು ವಾರದಲ್ಲಿ ಸಾಫ್ಟ್‌ವೇರ್ ಬಳಸಿ ಮಾಹಿತಿ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ನೀಡಲಾಗುವುದು. ವಲಸೆ ಕಾರ್ಮಿಕರು ಜಿಲ್ಲೆಯನ್ನು ಬಿಡದಂತೆ ಅವರ ಮನವೊಲಿಕೆಗೆ ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು. ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿ ಜಿಲ್ಲಾಡಳಿತದ ಬಳಿ ಈಗಾಗಲೇ ೧೦ ಕೋಟಿ ರೂ. ಹಣವಿದೆ. ಅಗತ್ಯ ಸಲಕರಣೆಗಳ ಖರೀದಿಗೆ ಸರಕಾರದಿಂದ ಜಿಲ್ಲೆಗೆ ಹೆಚ್ಚುವರಿಯಾಗಿ ೫ ಕೋಟಿ ರೂ.ಗಳು ಬಿಡುಗಡೆಯಾಗಿದೆ. ಹಾಗಾಗಿ ಹಣದ ಕೊರತೆ ಇಲ್ಲ. ಅಗತ್ಯವಿದ್ದಲ್ಲಿ ಮೊರಾರ್ಜಿ ದೇಸಾಯಿ, ಮಂಗಳೂರು ವಿವಿ ಹಾಸ್ಟೆಲ್‌ಗಳನ್ನು ಕೋವಿಡ್ ಕೇರ್ ಸೆಂಟರ್‌ಗಳಾಗಿ ಪರಿವರ್ತಿಸಲಾಗುವುದು. ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಕ್ರಿಯೆಯನ್ನು ಬೋಳೂರು, ನಂದಿಗುಡ್ಡೆ ಸ್ಮಶಾನಗಳಲ್ಲಿ ವೆಚ್ಚವನ್ನು ಮನಪಾದಿಂದ ಭರಿಸಿಕೊಂಡು ನೆರವೇರಿಸಲು ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ ಬಡಗ ಎಕ್ಕಾರಿನಲ್ಲಿ ಸರ್ವ ಧರ್ಮೀಯರ ಅಂತ್ಯಕ್ರಿಯೆಗೆ ಅನುಕೂಲವಾಗುವಂತೆ ೫ ಎಕರೆ ಸರಕಾರಿ ಭೂಮಿಯನ್ನು ಗುರುತಿಸಲಾಗಿದೆ. ಮಂಗಳವಾರ ಮಧ್ಯಾಹ್ನ ನಗರದ ವೆನ್‌ಲಾಕ್ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಲಸಿಕೆ ಸಂಗ್ರಹ ಮುಗಿದಿತ್ತು. ಆದರೆ ರಾತ್ರಿ ವೇಳೆಗೇ ೨೦,೦೦೦ ಕೋವಿಶೀಲ್ಡ್ ಲಸಿಕೆ ಬೆಂಗಳೂರಿನಿಂದ ಪೂರೈಕೆಯಾಗಿದೆ. ಇದೇ ವೇಳೆ ೨೦೦೦ ಕೋವ್ಯಾಕ್ಸಿನ್ ಕೂಡಾ ಪೂರೈಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.

ಕರ್ಫ್ಯೂ ಸಂದರ್ಭ ಅನಗತ್ಯ
ಪ್ರಯಾಣ ಬೆಳೆಸಿದರೆ ಕ್ರಮ

ವೀಕೆಂಡ್ ಕರ್ಫ್ಯೂ ಸಂದರ್ಭ ಬೆಳಗ್ಗೆ ೬ರಿಂದ ೧೦ ಗಂಟೆಯವರೆಗೆ ಅಗತ್ಯ ಸಾಮಗ್ರಿಗಳ ಖರೀದಿಗೆ ಅವಕಾಶ ನೀಡಲಾಗಿದೆ. ಹಾಗೆಂದು ಹಾಲು, ಅಕ್ಕಿ, ತರಕಾರಿ ತರಲೆಂದು ಮಂಗಳೂರಿನವರು ಸುರತ್ಕಲ್, ಉಳ್ಳಾಲ ಅಥವಾ ಬೇರೆಡೆಗೆ ಅನಗತ್ಯ ವಾಹನಗಳಲ್ಲಿ ಸಂಚಾರ ಬೆಳೆಸಿದರೆ ಕ್ರಮ ವಹಿಸಲಾಗುವುದು. ದಿನಸಿ ಸೇರಿದಂತೆ ಅಗತ್ಯ ವಸ್ತುಗಳು ಮನೆಯ ಅಕ್ಕಪಕ್ಕದಲ್ಲೇ ಸಿಗುವುದರಿಂದ ಸಬೂಬು ಹೇಳಿಕೊಂಡು ತಿರುಗಾಡುವುದು ಬೇಡ. ಸಾರ್ವಜನಿಕರೇ ಈ ನಿಟ್ಟಿನಲ್ಲಿ ಇಲಾಖೆ ಜತೆ ಸಹಕರಿಸಬೇಕು ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದರು.