‘ದ.ಕ. ಜಿಲ್ಲೆಯಲ್ಲಿ ೧೭,೦೮,೯೫೫ ಮತದಾರರು’  


ಮಂಗಳೂರು, ನ.೧೨- ಮತದಾರರ ಪಟ್ಟಿ ಪರಿಷ್ಕರಣೆ ೨೦೨೩ರ ಹಿನ್ನೆಲೆಯಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅದರಂತೆ ದ.ಕ. ಜಿಲ್ಲೆಯಲ್ಲಿ ಒಟ್ಟು ೧೭,೦೮,೯೫೫ ಮತದಾರರನ್ನು ಗುರುತಿಸಲಾಗಿದೆ. ಇವರಲ್ಲಿ ಮಹಿಳೆಯರ ಸಂಖ್ಯೆ ೮,೭೧,೩೬೪ ಆಗಿದ್ದು, ಪುರುಷ ಮತದಾರರು ೮,೩೭,೫೨೭ ಎಂದು ದ.ಕ. ಜಿಲ್ಲಾಧಿಕಾರಿ ರವಿ ಎಂ.ಆರ್. ತಿಳಿಸಿದ್ದಾರೆ.
ದ.ಕ. ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ ೮ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆಯ ಹಿನ್ನೆಲೆಯಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯ ಹಿನ್ನೆಲೆಯಲ್ಲಿ ವಿಶೇಷ ನೋಂದಣಿ ಅಭಿಯಾನ ನ. ೧೨, ನ. ೨೦, ಡಿ. ೩ ಮತ್ತು ಡಿ. ೪ರಂದು ನಡೆಯಲಿದೆ. ೨೦೨೩ರ ಜನವರಿ ೩ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ದ.ಕ. ಜಿಲ್ಲಾ ವಿಧಾನಸಭಾ ಕ್ಷೇತ್ರಗಳ ಪೈಕಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರವು ೨,೩೯,೫೩೪ ಮತದಾರರೊಂದಿಗೆ ಅತಿ ಹೆಚ್ಚು ಮತದಾರರನ್ನು ಹೊಂದಿದ್ದು, ಮಂಗಳೂರು (ಉಳ್ಳಾಲ) ೧,೯೨,೩೧೫ ಮತದಾರರೊಂದಿಗೆ ಅತಿ ಕಡಿಮೆ ಮತದಾರನ್ನು ಹೊಂದಿರುವ ಕ್ಷೇತ್ರವಾಗಿದೆ. ೨೦೨೨ರ ಜನವರಿ ೧೩ರಂದು ಪ್ರಕಟಗೊಂಡ ಅಂತಿಮ ಮತದಾರರ ಪಟ್ಟಿಯಂತೆ ದ.ಕ. ಜಿಲ್ಲೆಯಲ್ಲಿ ಒಟ್ಟು ೧೭,೫೩,೩೨೮ ಮತದಾರರಿದ್ದರು. ಪರಿಷ್ಕರಣೆಯ ಸಂದರ್ಭ ೭೩,೭೮೨ ಮಂದಿಯ ಹೆಸರನ್ನು ತೆಗೆದು ಹಾಕಲಾಗಿದೆ. ಇದೇ ಅವಧಿಯವಲ್ಲಿ ಹೊಸತಾಗಿ ೨೯೪೧೦ ಹೊಸ ಮತದಾರರ ಸೇರ್ಪಡೆಯಾಗಿದೆ. ಹೀಗಾಗಿ ಈ ಹಿಂದಿನ ಅಂತಿಮ ಮತದಾರರ ಪಟ್ಟಿಗಿಂತ ೪೪,೩೭೩ ಮತದಾರರು ಕಡಿಮೆಯಾಗಿದ್ದಾರೆ. ೨೦೧೧ರ ಜನಗಣತಿ ಅನುಸಾರ ಜಿಲ್ಲೆಯಲ್ಲಿ ಲಿಂಗಾನುಪಾತ ೧,೦೨೦ ಇದ್ದು, ಪ್ರಸಕ್ತ ಮತದಾರರ ಪಟ್ಟಿಯ ಅನುಸಾರ ಲಿಂಗ ಅನುಪಾತ ೧,೦೪೦ ಆಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಮಾನ್ಯತೆ ಪಡೆದ ಮತ್ತು ನೋಂದಾಯಿತ ರಾಜಕೀಯ ಪಕ್ಷಗಳು ಪ್ರತಿ ವಿಧಾನಸಭಾ ಕ್ಷೇತ್ರದ ಪ್ರತಿ ಮತಗಟ್ಟೆಗೆ ಒಬ್ಬರಂತೆ ಬೂತ್ ಲೆವೆಲ್ ಏಜೆಂಟ್ (ಬಿಎಲ್‌ಎ) ನೇಮಕಾತಿ ಮಾಡಿ ಮತಗಟ್ಟೆ ಅಧಿಕಾರಿಗಳಿಗೆ ಅರ್ಹ ಮತದಾರರ ನೋಂದಣಿ ಕಾರ್ಯದಲ್ಲಿ ಸಹಕಾರ ನೀಡಲು ಕೋರಲಾಗಿದೆ. ಎಲ್ಲ ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಹಾಗೂ ದೋಷ ರಹಿತ ಮತದಾರರ ಪಟ್ಟಿಯನ್ನು ತಯಾರಿಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಪ್ರಕಟವಾಗಿರುವ ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ, ತೆಗೆದು ಹಾಕಿರುವ ಹೆಸರುಗಳು ಹಾಗೂ ಉಂಟಾಗಿರುವ ಇತರ ಬದಲಾವಣೆಗಳ ಬಗ್ಗೆ ಮತದಾರರು ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿರುವ ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿಗೆ ಭೇಟಿಗೆ ನೀಡಿ ಪರಿಶೀಲಿಸಬಹುದು. ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳಲ್ಲಿ ಪರಿಶೀಲಿಸಬಹುದು ಎಂದು ಜಿಲ್ಲಾಧಿಕಾರಿ ರವಿ ಎಂ.ಆರ್. ತಿಳಿಸಿದರು. ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತ ಮದನ್ ಮೋಹನ್ ಉಪಸ್ಥಿತರಿದ್ದರು.