ದ.ಕ. ಜಿಲ್ಲೆಯಲ್ಲಿ ಕೌಟುಂಬಿಕ ಮಹಿಳಾ ದೌರ್ಜನ್ಯ ಹೆಚ್ಚುತ್ತಿದೆ

ಪುತ್ತೂರು, ಮಾ.೩೧- ಹೆಣ್ಣಿಗೆ ಪೂಜನೀಯ ಸ್ಥಾನಮಾನ ನೀಡಿರುವ ಸಮಾಜದಲ್ಲಿ ಇಂದು ಕೌಟುಂಬಿಕ ದೌರ್ಜನ್ಯ ಹೆಚ್ಚುತ್ತಿದೆ. ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುವ ಘಟನೆಗಳು ಮಿತಿ ಮೀರುತ್ತಿವೆ. ಸುಶಿಕ್ಷಿತ ಮಂದಿ ಇರುವ ದಕ ಜಿಲ್ಲೆಯಲ್ಲಿ ಇಂತಹ ದೌರ್ಜನ್ಯಗಳು ಪ್ರಸ್ತುತ ಮಹಿಳೆಯರ ಬದುಕನ್ನು ಕಿತ್ತು ತಿನ್ನುತ್ತಿದೆ. ಆದರೆ ನ್ಯಾಯಕ್ಕಾಗಿ ಮಹಿಳೆಯರು ಪರದಾಟ ಮಾಡುವ ಹಾಗೂ ನ್ಯಾಯ ಕೇಳಲು ಎಲ್ಲಿಗೆ ಹೋಗಬೇಕು ಎನ್ನುವ ಮಾಹಿತಿ ಕೊರತೆಯ ಗೊಂದಲ ಮಹಿಳೆಯರದ್ದಾಗಿದೆ.

ಈ ವಿಚಾರ ಪುತ್ತೂರು ತಾಪಂ ಸಭಾಂಗಣದಲ್ಲಿ ತಹಸೀಲ್ದಾರ್ ರಮೇಶ್ ಬಾಬು ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯ ನಾನಾ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ವ್ಯಕ್ತವಾಯಿತು.

ವರದಕ್ಷಿಣೆ ನಿಷೇಧ ಕಾಯಿದೆ, ಮಾದಕ ವಸ್ತು ಸೇವನೆ ನಿಷೇಧ ಕಾಯಿದೆ, ಸ್ತ್ರೀಶಕ್ತಿ ಯೋಜನೆಯ ಸಮನ್ವಯ ಸಮಿತಿ, ಮಕ್ಕಳ ಮಾರಾಟ ಮತ್ತು ಸಾಗಾಟ ತಡೆ ಸಮಿತಿ, ಬಾಲ್ಯ ವಿವಾಹ ನಿಷೇಧ ಕಾಯಿದೆ ಸಮಿತಿ, ಭಾಗ್ಯಲಕ್ಷ್ಮೀ ಯೋಜನೆಯ ಕ್ರಿಯಾತಂಡ, ಕೌಟುಂಬಿಕ ದೌರ್ಜನ್ಯ ತಡೆ ಸಮಿತಿ, ಮಕ್ಕಳ ರಕ್ಷಣಾ ಸಮಿತಿ, ವಿಕಲ ಚೇತನರ ಸಮಿತಿ, ಮಹಿಳಾ ದೌರ್ಜನ್ಯ ತಡೆ ಸಮಿತಿ, ಮಾತೃವಂದನಾ ಸಮಿತಿ, ಭೇಟಿ ಪಡಾವೊ, ಭೇಟಿ ಬಚಾವೊ ಸಮಿತಿ, ಗೆಳತಿ ವಿಶೇಷ ಚಿಕಿತ್ಸಾ ಘಟಕ, ಐಸಿಡಿಎಸ್ ಸಮನ್ವಯ ಸಮಿತಿಗಳ ಪ್ರಗತಿ ಪರಿಶೀಲನೆ ಮಾಡಲಾಯಿತು.

ಜಿಲ್ಲಾ ಸಮಿತಿಗಳ ಸದಸ್ಯೆ ಝೊಹರಾ ನಿಸಾರ್ ವಿಷಯ ಪ್ರಸ್ತಾಪಿಸಿ, ಕೌಟುಂಬಿಕ ದೌರ್ಜನ್ಯ ಉಂಟಾದಾಗ ಮಹಿಳಾ ಪೊಲೀಸ್ ಠಾಣೆಗೆ ಹೋಗಬೇಕೋ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ಹೋಗಬೇಕೋ, ಸಾಂತ್ವನ ಕೇಂದ್ರಕ್ಕೆ ಹೋಗಬೇಕೋ ಎಂಬ ಗೊಂದಲವಿದೆ ಎಂದು ಹೇಳಿದರು. ಈ ಬಗ್ಗೆ ಮಾತನಾಡಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಅವರು ದೂರು ಎಲ್ಲಿಯೂ ನೀಡಬಹುದು. ಪ್ರಕರಣ ನಮ್ಮ ಇಲಾಖೆಗೆ ಬರುತ್ತದೆ. ನಾವು ಆಪ್ತ ಸಂವಾದದಿಂದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ. ಸಾಂತ್ವನ ಕೇಂದ್ರದಲ್ಲೂ ಕೌನ್ಸೆಲಿಂಗ್ ನಡೆಯುತ್ತದೆ. ಫಲ ಸಿಗದಿದ್ದರೆ ಕೋರ್ಟ್ ಮೂಲಕ ನೋಡಿಕೊಳ್ಳಬೇಕಾಗುತ್ತದೆ ಎಂದರು.

೪೮ ಕೋಟಿ ಇದ್ದರೂ ಸಾಲಕ್ಕೆ ಕಷ್ಟ

ಸ್ತ್ರೀಶಕ್ತಿ ಗುಂಪುಗಳು ಆರಂಭಗೊಂಡ ಬಳಿಕ ಕಳೆದ ೨೦ ವರ್ಷದಲ್ಲಿ ಪುತ್ತೂರು ತಾಲೂಕಿನ ಸದಸ್ಯೆಯರು ವಾರಕ್ಕೆ ೧೦ ರೂ.ಗಳಂತೆ ಮಾಡಿದ ಉಳಿತಾಯದ ಮೊತ್ತವೇ ೪೮ ಕೋಟಿ ರೂ.ಗಳಿವೆ. ಆದರೆ ಸ್ವ ಉದ್ಯೋಗಕ್ಕೆ ಗುಂಪುಗಳು ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ನಿಯಮಗಳ ಬಲೆ ಹರಡಿ ಸಾಲ ನೀಡಲಾಗುತ್ತಿಲ್ಲ. ಇದರ ನಿಯಮ ಸಡಿಲಗೊಳಿಸಬೇಕು ಎಂದು ಝೊಹರಾ ನಿಸಾರ್ ಆಗ್ರಹಿಸಿದರು.

ಸ್ತ್ರೀಶಕ್ತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನವೋದಯ ಸೇರಿದಂತೆ ಸ್ವಸಹಾಯ ಸಂಘಗಳಿಗೆ ನೀಡಲೆಂದೇ ಕಳೆದ ಸಾಲಿನಲ್ಲಿ ೧.೧೮ ಕೋಟಿ ರೂ. ಪುತ್ತೂರು ತಾಲೂಕಿಗೆ ಅನುದಾನ ಬಂದಿತ್ತು. ೨೦೨೦-೨೧ನೇ ಸಾಲಿನಲ್ಲಿ ೧.೧೬ ಕೋಟಿ ರೂ. ಬಂದಿದೆ. ಇದೆಲ್ಲವೂ ಹಂಚಿಕೆಯಾಗಿದೆ. ಎ ದರ್ಜೆಯ ಸಂಘಗಳಿಗೆ ಇದನ್ನು ನೀಡಲಾಗುತ್ತದೆ ಎಂದು ಅಧಿಕಾರಿ ಉತ್ತರಿಸಿದರು.

ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಸಲಹಾ ಪಟ್ಟಿಗೆ ಸ್ಥಾಪನೆ, ಸುರಕ್ಷಾ ನಿಧಿ ಸ್ಥಾಪನೆ ಸೇರಿದಂತೆ ಅನೇಕ ನಿಯಮಗಳಿವೆ. ಕೆಲವು ಶಾಲೆಗಳು ಇದನ್ನು ಪಾಲಿಸುತ್ತಿಲ್ಲ ಎಂದು ಮಕ್ಕಳ ರಕ್ಷಣಾ ಘಟಕದ ವಝೀರ್ ಹೇಳಿದರು.

ತಾಲೂಕಿನಲ್ಲಿ ೫ ಮಕ್ಕಳ ಪಾಲನಾ ಕೇಂದ್ರಗಳಿದ್ದು, ಇಲ್ಲಿ ೪೨೬ ಮಕ್ಕಳು ಪಾಲನೆಯಾಗುತ್ತಿಲ್ಲ.  ಕೊಳ್ತಿಗೆ ಗ್ರಾಮದಲ್ಲಿ ಮಗುವನ್ನು ಪರಿತ್ಯಕ್ತಗೊಳಿಸಿದ ತಾಯಿಗೆ ಕೌನ್ಸೆಲಿಂಗ್ ನೀಡಲಾಗುತ್ತಿದೆ. ಮಗು ಆಶ್ರಮದಲ್ಲಿ ಆರೋಗ್ಯವಾಗಿದೆ. ಕಾನೂನು ಪಾಲನೆ ಜತೆಗೆ ತಾಯಿ- ಮಗುವಿನ ಮರು ಸಮಾಗಮಕ್ಕೆ ಆದ್ಯತೆ ನೀಡಲಾಗುವುದು ಎಂದು ಸಿಡಿಪಿಒ ಶ್ರೀಲತಾ ಹೇಳಿದರು.

ವ್ಯಾಪ್ತಿ ನಮ್ಮದ್ದಲ್ಲ…!

ಕಾಸರಗೋಡು ಮತ್ತು ದ.ಕ. ಜಿಲ್ಲೆಯ ಸಾವಿರಾರು ಕುಟುಂಬಗಳ ಮಧ್ಯೆ ವೈವಾಹಿಕ ಸಂಬಂಧಗಳಿದ್ದು, ಇಂತ ಮನೆಗಳಲ್ಲಿ ಮಹಿಳೆಗೆ ಕೌಟುಂಬಿಕ ದೌರ್ಜನ್ಯ ಉಂಟಾದಾಗ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ. ಇದು ನಮ್ಮ ವ್ಯಾಪ್ತಿಯಲ್ಲ ಎಂದು ವಾದಿಸುತ್ತಿದ್ದಾರೆ ಎಂದು ಝೊಹಾರಾ ನಿಸಾರ್ ಹೇಳಿದರು.

ಈ ಬಗ್ಗೆ ಉತ್ತರಿಸಿದ ತಹಶೀಲ್ದಾರ್ ರಮೇಶ್ ಬಾಬು ಅವರು ಯಾವುದೇ ಕಾರಣಕ್ಕೂ ಮಹಿಳಾ ದೌರ್ಜನ್ಯದ ಕೇಸುಗಳನ್ನು ಈ ರೀತಿ ನಿರ್ಲಕ್ಷಿಸಬಾರದು. ದೂರು ಸ್ವೀಕರಿಸಿ ಸಂಬಂಧಪಟ್ಟವರಿಗೆ ಹಸ್ತಾಂತರ ಮಾಡಬೇಕು. ಇಲ್ಲಿ ಯಾವುದೇ ವ್ಯಾಪ್ತಿಯ ಪ್ರಶ್ನೆ ಬರುವುದಿಲ್ಲ ಎಂದು ತಿಳಿಸಿದರು.  ಅತ್ತೆ ಮನೆ ಮತ್ತು ತಾಯಿ ಮನೆಗಳ ಪೈಕಿ ಒಂದು ಮನೆ ಇಲ್ಲಿದ್ದರೂ ನಾವು ದೂರು ಸ್ವೀಕರಿಸುತ್ತೇವೆ ಎಂದು ಸಿಡಿಪಿಒ ಶ್ರೀಲತಾ ಹೇಳಿದರು.

ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವಾ, ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ, ನರೇಗಾ ಸಹಾಯಕ ನಿರ್ದೇಶಕಿ ಶೈಲಜಾ ಉಪಸ್ಥಿತರಿದ್ದರು. ಸಿಡಿಪಿಒ ಕಚೇರಿಯ ಹಿರಿಯ ಮೇಲ್ವಿಚಾರಕಿ ಭಾರತಿ ಪೂರಕ ಮಾಹಿತಿ ನೀಡಿದರು.