ದ.ಕ. ಜಿಲ್ಲೆಗೆ ಬಂದ ೨೧.೫ ಟನ್ ಆಕ್ಸಿಜನ್

ಮಂಗಳೂರು, ಮೇ ೫- ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳವಾರ ಸಂಜೆ ಒಟ್ಟು ೨೧.೫ ಟನ್ ಆಮ್ಲಜನಕ ಬಂದಿದ್ದು, ಇಂದು (ಬುಧವಾರ) ಮಧ್ಯಾಹ್ನ ವೇಳೆ ಮತ್ತೆ ಏಳೂ ಟನ್ ಹಾಗೂ ಒಂಬತ್ತು ಟನ್ ಆಕ್ಸಿಜನ್ ಬರಲಿದೆ. ಈ ಆಮ್ಲಜನಕವನ್ನು ೨೬ ಖಾಸಗಿ ಆಸ್ಪತ್ರೆಗಳು ಮತ್ತು ಐದು ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಗ್ರಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ ವಿ. ಮಾಹಿತಿ ನೀಡಿದ್ದಾರೆ.
ಜಿಲ್ಲೆಗೆ ಆಮ್ಲಜನಕದ ಕೊರತೆಯಿಲ್ಲ. ಸಾಮಾನ್ಯ ಅವಧಿಯಲ್ಲಿ ಎರಡು ದಿನಗಳಿಗೊಮ್ಮೆ ಜಿಲ್ಲೆಗೆ ಆಮ್ಲಜನಕ ಸಿಗುತ್ತದೆ. ಪಾಲಕ್ಕಾಡ್‌ನಿಂದ ಬರುವ ಕಚ್ಚಾ ವಸ್ತುಗಳ ಲಭ್ಯತೆಯ ಸಮಸ್ಯೆ ಬಗ್ಗೆ ನಾವು ಸರ್ಕಾರಕ್ಕೆ ಮಾಹಿತಿ ನೀಡಿದ್ದೇವೆ. ಈಗಾಗಲೇ ಬಳ್ಳಾರಿಯಿಂದ ಅಗತ್ಯವಾದ ಆಮ್ಲಜನಕವನ್ನು ಪರ್ಯಾಯವಾಗಿ ಪಡೆಯಲು ನಾವು ಸೂಚಿಸಿದ್ದೇವೆ” ಎಂದು ವಿವರಿಸಿದರು. ಇನ್ನು ಈ ಬಗ್ಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಜಿಲ್ಲೆಯ ಕರೋನವೈರಸ್ ರೋಗಿಗಳಲ್ಲಿ ಕೇವಲ ೧೫ ಪ್ರತಿಶತದಷ್ಟು ಜನರಿಗೆ ಮಾತ್ರ ವೈದ್ಯಕೀಯ ಆಮ್ಲಜನಕದ ಅಗತ್ಯವಿರುತ್ತದೆ. ಜಿಲ್ಲೆಗೆ ಹೆಚ್ಚುವರಿ ಪ್ರಮಾಣದ ಆಮ್ಲಜನಕವನ್ನು ಒದಗಿಸುವಂತೆ ಆಮ್ಲಜನಕ ಸಂಬಂಧಿತ ವಿಷಯಗಳ ಉಸ್ತುವಾರಿ ವಹಿಸಿರುವ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಮಾಡಲಾಗುವುದು” ಎಂದು ತಿಳಿಸಿದರು. ಇನ್ನು ”ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ೩,೦೦೦ ಲೀಟರ್ ಆಮ್ಲಜನಕವಿದೆ. ಅದು ಐದರಿಂದ ಆರು ದಿನಗಳವರೆಗೆ ಸಾಕಾಗಬಹುದು. ಆಮ್ಲಜನಕದ ಅಗತ್ಯವಿರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಪ್ರತಿದಿನ ೪೦೦ ರಿಂದ ೫೦೦ ಲೀಟರ್ ಆಮ್ಲಜನಕವು ಆಸ್ಪತ್ರೆಗೆ ಅಗತ್ಯವಾಗಿರುತ್ತದೆ” ಎಂದು ಉಡುಪಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮಧುಸೂದನ್ ನಾಯಕ್ ತಿಳಿಸಿದ್ದಾರೆ.