ದ.ಕ: ಕೊರೊನಾಗೆ ಮೂವರು ಮೃತ್ಯು

ಮಂಗಳೂರು, ಎ.೨೮- ದ.ಕ.ಜಿಲ್ಲೆಯಲ್ಲಿ ಮಂಗಳವಾರ ಕೊರೋನಕ್ಕೆ ವೈದ್ಯೆ ಸಹಿತ ಮೂವರು ಮೃತಪಟ್ಟಿದ್ದು, ಇದರಲ್ಲಿ ಮಂಗಳೂರಿನ ಇಬ್ಬರು ಮತ್ತು ಸುಳ್ಯ ತಾಲೂಕಿನ ಒಬ್ಬರು ಸೇರಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಮೃತಪಟ್ಟವರ ಸಂಖ್ಯೆ ೭೫೧ಕ್ಕೇರಿದೆ.

ಮಂಗಳವಾರ ೪೮೬ ಕೊರೋನ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಇದರೊಂದಿಗೆ ೪೨,೦೬೫ ಪಾಸಿಟಿವ್ ಪ್ರಕರಣಗಳು ಕಂಡು ಬಂದಂತಾಗಿದೆ. ಮಂಗಳವಾರ ೨೨೫ ಮಂದಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ೩೭,೦೨೪ ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ೭,೨೪,೧೨೮ ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಆ ಪೈಕಿ ೬,೮೨,೭೬೩ ಮಂದಿಯ ವರದಿ ನೆಗೆಟಿವ್ ಬಂದಿ?ದು, ೪,೨೯೦ ಸಕ್ರಿಯ ಪ್ರಕರಣವಿದೆ. ಜಿಲ್ಲೆಯಲ್ಲಿ ಮಂಗಳವಾರ ೪ ಕಡೆಗಳಲ್ಲಿ ಕಂಟೈನ್‌ಮೆಂಟ್ ವಲಯ ಘೋಷಿಸಿಲಾಗಿದೆ. ಕೊಣಾಜೆ ಬಳಿ ಮನೆಯೊಂದರ ೫ ಮಂದಿಗೆ, ನಿಡ್ಡೋಡಿ ಬಳಿ ಅಕ್ಕಪಕ್ಕದ ೨ ಮನೆಯ ೮ ಮಂದಿಗೆ, ಕಲ್ಲಮುಂಡ್ಕೂರು ಬಳಿ ಅಕ್ಕಪಕ್ಕದ ಮನೆಯ ೧೬ ಮಂದಿಗೆ ಮತ್ತು ಮಂಚಿ ಬಳಿ ಮನೆಯೊಂದರ ೫ ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಆ ವಲಯವನ್ನು ಕಂಟೈನ್ಮೆಂಟ್ ವಲಯ ಎಂದು ಗುರುತಿಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕಂಟೈನ್ಮೆಂಟ್ ವಲಯಗಳ ಸಂಖ್ಯೆ ೩೭ಕ್ಕೇರಿದೆ. ಜಿಲ್ಲೆಯಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದುದಕ್ಕೆ ಸಂಬಂಧಿಸಿ ಈವರೆಗೆ ೪೯,೨೮೧ ಪ್ರಕರಣ ದಾಖಲಿಸಿ ೫೧,೩೪,೧೮೦ ರೂ. ದಂಡ ವಸೂಲಿ ಮಾಡಲಾಗಿದೆ.

ಗರ್ಭಿಣಿ ವೈದ್ಯೆ ಮೃತ್ಯು

ಮಂಗಳವಾರ ಜಿಲ್ಲೆಯಲ್ಲಿ ೮,೧೬೬ ಮಂದಿ ಕೋವಿಡ್ ಲಸಿಕೆ ಪಡೆದುಕೊಂಡರು. ಮಂಗಳವಾರ ಜಿಲ್ಲೆಗೆ ೧೫ ಸಾವಿರ ಡೋಸ್ ಕೋವಿಶೀಲ್ಡ್ ಲಸಿಕೆ ಬಂದಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸುಮಾರು ೨೦ ಸಾವಿರ ಡೋಸ್ ಲಸಿಕೆ ಲಭ್ಯವಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಕೇರಳದ ಮಲಪ್ಪುರಂ ನಿವಾಸಿ ಗರ್ಭಿಣಿ ವೈದ್ಯೆರೊಬ್ಬರು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಲ್ಲಿ ಎಂಬಿಬಿಎಸ್ ವೈದ್ಯರಾಗಿ ಸೇವೆ ಸಲ್ಲಿಸಿ ಬಳಿಕ ವಿವಾಹವಾಗಿ ಮಲಪ್ಪುರಂನಲ್ಲಿ ವಾಸವಾಗಿದ್ದರು. ಅವರ ಮನೆಯಲ್ಲಿ ಎಲ್ಲರಿಗೂ ಜ್ವರ ಬಂದ ಕಾರಣ ಗರ್ಭಿಣಿಯಾಗಿದ್ದ ವೈದ್ಯೆಯು ಕೆಲವು ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ರಾತ್ರಿಯಿಂದಲ್ಲೇ ಈ ವೈದ್ಯೆಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟರು. ಅವರಿಗೆ ಕೋವಿಡ್ ಸೋಂಕು ತಗಲಿತ್ತು ಎಂದು ಆರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿದೆ.