ದ.ಕ.: ಕರ್ತವ್ಯಕ್ಕೆ ಹಾಜರಾಗದ ಸಾರಿಗೆ ನೌಕರರು

ಮಂಗಳೂರು, ಎ.೭- ವೇತನ ಪರಿಷ್ಕರಣೆ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ಸಾರ್ಟಿಸಿ ನೌಕರರು ಇಂದಿನಿಂದ ಆರಂಭಿಸಿರುವ ಮುಷ್ಕರಕ್ಕೆ ದ.ಕ. ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ನೌಕರರು ಕರ್ತವ್ಯಕ್ಕೆ ಹಾಜರಾಗದ ಕಾರಣ ಬಸ್ ಗಳು ಡಿಪೋದಲ್ಲೇ ಉಳಿದುಕೊಂಡಿವೆ. ಆದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳೇ ಭಾರೀ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ನೌಕರರ ಮುಷ್ಕರದ ಬಿಸಿ ನಾಗರಿಕರಿಗೆ ಅಷ್ಟಾಗಿ ತಟ್ಟಲ್ಲ ಎಂಬ ಮಾತು ಕೂಡ ಕೇಳಿ ಬರುತ್ತಿದೆ.
ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ ೪೭೦ಕ್ಕೂ ಅಧಿಕ ಬಸ್ ಗಳು ಬುಧವಾರ ನಿಲ್ದಾಣದಲ್ಲಿಯೇ ತಂಗಿವೆ. ಈ ನಡುವೆ ಸರಕಾರಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಗಳು ಪ್ರಯಾಣಿಕರನ್ನು ಹತ್ತಿಸಿಕೊಂಡು ಪ್ರಯಾಣ ಬೆಳೆಸುತ್ತಿರುವುದು ಕಂಡುಬರುತ್ತಿದೆ. ಬಸ್ ಮುಷ್ಕರದ ಬಗ್ಗೆ ಮಾಹಿತಿ ಇದ್ದ ಕಾರಣದಿಂದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಇಂದು ಪ್ರಯಾಣಿಕರ ಸಂಖ್ಯೆ ವಿರಳವಾಗಿ ಕಂಡುಬರುತ್ತಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಸುಳ್ಯದಲ್ಲೂ ಸಾರಿಗೆ ನೌಕರರ ಮುಷ್ಕರ ಪರಿಣಾಮ ಬೀರಿದ್ದು, ಯಾವುದೇ ಕೆಎಸ್ಸಾರ್ಟಿಸಿ ಬಸ್ ಗಳು ರಸ್ತೆಗಿಳಿದಿಲ್ಲ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.