ದ.ಕೊರಿಯಾ ಒಳಾಂಗಣದಲ್ಲಿ ಮಾಸ್ಕ್ ಕಡ್ಡಾಯವಿಲ್ಲ

ಸಿಯೋಲ್ (ದಕ್ಷಿಣ ಕೊರಿಯಾ),ಜ.೨೦-ಕೊರೊನಾ ಅಬ್ಬರ ನಿಧಾನವಾಗಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ದಕ್ಷಿಣ ಕೊರಿಯಾ ತನ್ನ ನಿಯಮದಲ್ಲಿ ಕೂಡ ಕೆಲವೊಂದು ಮಾರ್ಪಾಡುಗಳನ್ನು ಮಾಡಿದೆ. ಒಳಾಂಗಣ ಪ್ರದೇಶಗಳಲ್ಲಿ ಇಲ್ಲಿಯ ವರೆಗೆ ಚಾಲ್ತಿಯಲ್ಲಿದ್ದ ಕಡ್ಡಾಯ ಮಾಸ್ಕ್ ನಿಯಮವನ್ನು ಇದೀಗ ಹಿಂದಕ್ಕೆ ಪಡೆಯಲಾಗಿದ್ದು, ಜನವರಿ ೩೦ರ ಬಳಿಕ ಇದು ಜಾರಿಗೆ ಅನುಷ್ಟಾನಗೊಳ್ಳಲಿದೆ.
ದಕ್ಷಿಣ ಕೊರಿಯಾದಲ್ಲಿ ಇದೀಗ ಕೊರೊನಾ ಪ್ರಕರಣಗಳು ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಸಾಂಕ್ರಾಮಿಕ ನಿರ್ಬಂಧಗಳಲ್ಲಿ ಒಂದನ್ನು ಕೊನೆಗೊಳಿಸಲಾಗಿದೆ. ಹಾಗಾಗಿ ಜನವರಿ ೩೦ರ ಬಳಿಕ ಒಳಾಂಗಣ ಪ್ರದೇಶದಲ್ಲೂ ಮಾಸ್ಕ್ ಧರಿಸಬೇಕಾದ ಕಡ್ಡಾಯ ನಿಯಮವನ್ನು ಇದೀಗ ತೆಗೆದುಹಾಕಲಾಗಿದೆ. ಸಹಜವಾಗಿಯೇ ಇದು ನಾಗಿರಕರಿಗೆ ದೊಡ್ಡ ರಿಲೀಫ್ ನೀಡಿದಂತಾಗಿದೆ. ಸಾರ್ವಜನಿಕ ಸಾರಿಗೆ ಮತ್ತು ವೈದ್ಯಕೀಯ ಸೌಲಭ್ಯಗಳ ಕೇಂದ್ರಗಳನ್ನು ಹೊರತುಪಡಿಸಿ ಇದು ಚಾಲ್ತಿಗೆ ಬರಲಿದೆ. ೨೦೨೦ರ ಅಕ್ಟೋಬರ್‌ನಿಂದ ಒಳಾಂಗಣ ಪ್ರದೇಶದಲ್ಲೂ ಕಡ್ಡಾಯ ಮಾಸ್ಕ್ ಧರಿಸುವ ನಿಯಮ ಜಾರಿಯಲ್ಲಿದ್ದು, ಸದ್ಯ ಇದು ದಕ್ಷಿಣ ಕೊರಿಯಾದ ಅಂತ್ಯದಲ್ಲಿ ಉಳಿದಿರುವ ಕಠಿಣ ನಿರ್ಬಂಧಗಳಲ್ಲಿ ಒಂದಾಗಿತ್ತು. ಈಗಾಗಲೇ ವ್ಯಾಪಾರ ಕರ್ಫ್ಯೂ ಹಾಗೂ ಸಾಮಾಜಿಕ ಅಂತರದ ನಿಯಮಗಳನ್ನು ಈಗಾಗಲೇ ಕೈಬಿಡಲಾಗಿದೆ. ಆದರೆ ಕೋವಿಡ್ ಸೋಂಕಿಗೆ ಒಳಗಾದವರು ಕಡ್ಡಾಯವಾಗಿ ಏಳು ದಿನಗಳ ಐಸೋಲೇಶನ್ ನಿಯಮವನ್ನು ಈಗಲೂ ಮುಂದುವರೆಸಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕೊರಿಯಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಏಜೆನ್ಸಿಯ ಮುಖ್ಯಸ್ಥ ಜೀ ಯಂಗ್-ಮೀ, ಕಡ್ಡಾಯ ಒಳಾಂಗಣ ಮಾಸ್ಕ್ ನಿಯಮಮಗಳ ಕುರಿತ ಹೊಂದಾಣಿಕೆಗಳನ್ನು ಜನವರಿ ೩೦ರ ಸೋಮವಾರದಿಂದ ಬಳಿಕ ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ಅಧಿಕೃತ ದಾಖಲೆಗಳ ಪ್ರಕಾರ ದಕ್ಷಿಣ ಕೊರಿಯಾದಲ್ಲಿ ಇಲ್ಲಿಯ ವರೆಗೆ ಸುಮಾರು ೩೦ ಮಿಲಿಯನ್ ನಾಗರಿಕರು ಕೋವಿಡ್ ಸೋಂಕಿಗೆ ಒಳಗಾಗಿದ್ದು, ೩೩,೦೦೦ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.