ಸಿಯೋಲ್ (ದಕ್ಷಿಣ ಕೊರಿಯಾ), ಜೂ.೧- ಒಂದು ಹಂತದಲ್ಲಿ ಬಹುತೇಕ ಇಡೀ ಜಗತ್ತನ್ನೇ ತನ್ನ ವ್ಯಾಪ್ತಿಗೆ ತೆಗೆದುಕೊಂಡಿದ್ದ ಕೋವಿಡ್ ಸೋಂಕಿನ ಅಬ್ಬರ ಇದೀಗ ಬಹುತೇಕ ಕಡಿಮೆ ಯಾಗಿದ್ದು, ಈಗಾಗಲೇ ಎಲ್ಲೆಡೆ ಸಹಜ ಸ್ಥಿತಿಗೆ ಮರಳಿದೆ. ಇದೇ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯಾ ಇಂದಿನಿಂದ (ಗುರುವಾರ) ಕೋವಿಡ್ ಸೋಂಕಿತರಿಗೆ ಏಳು ದಿನಗಳ ಕ್ವಾರಂಟೈನ್ ನಿಯಮವನ್ನು ಹಿಂದಕ್ಕೆ ಪಡೆದುಕೊಂಡಿದೆ.
ಕೋವಿಡ್ ಆರಂಭವಾದಂದಿನಿಂದ ಹೆಚ್ಚಿನ ದೇಶಗಳು ಕಠಿಣ ನಿಯಮಗಳನ್ನೇ ಅನುಸರಿಸಿತ್ತು. ಈ ಪೈಕಿ ಹಲವು ದೇಶಗಳು ಇತ್ತೀಚಿಗಿನ ತಿಂಗಳುಗಳಲ್ಲಿ ಕಠಿಣ ನಿಯಮಗಳನ್ನು ಕೈಬಿಟ್ಟು, ಸಾಮಾನ್ಯ ರೀತಿಯ ನಿಯಮಗಳನ್ನು ಅನುಸರಿಸಿತ್ತು. ಆದರೆ ದಕ್ಷಿಣ ಕೊರಿಯಾದಲ್ಲಿ ಮಾತ್ರ ಸೋಂಕಿತ ವ್ಯಕ್ತಿ ಏಳು ದಿನಗಳ ಕಡ್ಡಾಯ ಕ್ವಾರಂಟೈನ್ ತೆಗೆದುಕೊಳ್ಳುವ ನಿಯಮ ಅಳವಡಿಸಲಾಗಿತ್ತು. ಆದರೆ ಜೂನ್ ೧ರಿಂದ ಈ ನಿಯಮವನ್ನು ಅಲ್ಲಿನ ಸರ್ಕಾರ ಹಿಂದಕ್ಕೆ ಪಡೆದುಕೊಂಡಿದೆ. ಅಲ್ಲದೆ ಇನ್ನು ಮುಂದೆ ಕೋವಿಡ್ ಪೀಡಿತರಿಗೆ ಐದು ದಿನಗಳ ಸ್ವಯಂ ಪ್ರತ್ಯೇಕತೆಯನ್ನು ಹೊಂದುವ ಶಿಫಾರಸ್ಸು ನೀಡಿದ್ದರೂ ಅದು ಕಡ್ಡಾಯವಲ್ಲ. ಹಾಗಾಗಿ ಸಹಜವಾಗಿಯೇ ನಾಗರಿಕರಲ್ಲಿ ಸರ್ಕಾರದ ನೂತನ ನಿಯಮ ನೆಮ್ಮದಿ ಮೂಡಿಸಿದೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್‌ನ ಜಾಗತಿಕ ತುರ್ತು ಪರಿಸ್ಥಿತಿಯ ಅಂತ್ಯವನ್ನು ಘೋಷಿಸಿತ್ತು. ಸುಮಾರು ೫.೨೦ ಕೋಟಿ ಜನಸಂಖ್ಯೆ ಹೊಂದಿರುವ ದಕ್ಷಿಣ ಕೊರಿಯಾದಲ್ಲಿ ಸುಮಾರು ೩ ಕೋಟಿ ನಾಗರಿಕರು ಸೋಂಕಿಗೆ ತುತ್ತಾಗಿದ್ದರು. ಈ ಪೈಕಿ ೩೪,೬೦೦ ಮಂದಿ ಮೃತಪಟ್ಟಿದ್ದರು ಎಂದು ಕೊರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಏಜೆನ್ಸಿ ತಿಳಿಸಿದೆ.