ದ.ಆಫ್ರಿಕಾ ಪ್ರವಾಸ ನಿರ್ಬಂಧಕ್ಕೆ ಸಿರಿಲ್ ಬೇಸರ

ಡರ್ಬನ್ (ದಕ್ಷಿಣ ಆಫ್ರಿಕಾ), ನ.೨೯- ಹೊಸದಾಗಿ ಬೆಳಕಿಗೆ ಬಂದಿರುವ ಕೊರೊನಾದ ರೂಪಾಂತರಿ ತಳಿ ಒಮಿಕ್ರಾನ್ ವಿರುದ್ಧ ಈಗಾಗಲೇ ವಿಶ್ವದ ಬಹುತೇಕ ರಾಷ್ಟ್ರಗಳು ಜಾಗರೂಕವಾಗಿದ್ದು, ಕಠಿಣ ಕ್ರಮಗಳನ್ನು ಅನುಸರಿಸಿದೆ. ಈ ಹಿನ್ನೆಲೆಯಲ್ಲಿ ಸೋಂಕು ಪತ್ತೆಯಾಗಿರುವ ದಕ್ಷಿಣ ಆಫ್ರಿಕಾ ಮೇಲೆ ಈಗಾಗಲೇ ಪ್ರಯಾಣ ನಿರ್ಬಂಧ ಹೇರಲಾಗಿದೆ. ಆದರೆ ನಿರ್ಬಂಧ ವಿರುದ್ಧ ದ.ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಅಪಾಯಕಾರಿ ಎಂದೇ ಹೇಳಲಾಗಿರುವ ಒಮಿಕ್ರಾನ್ ಬೆಳಕಿಗೆ ಬಂದಿದ್ದು, ಬಳಿಕ ಇಸ್ರೇಲ್ ಸೇರಿದಂತೆ ಇತರೆ ಕೆಲವೇ ರಾಷ್ಟ್ರಗಳಲ್ಲೂ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಹಜವಾಗಿಯೇ ದ.ಆಫ್ರಿಕಾ ಸೇರಿದಂತೆ ಆಫ್ರಿಕಾದ ನೆರೆಯ ಐದು ರಾಷ್ಟ್ರಗಳ ಮೇಲೆ ಬ್ರಿಟನ್, ಅಮೆರಿಕಾ ಹಾಗೂ ಯುರೋಪಿಯನ್ ಯೂನಿಯನ್ (ಇಯು) ಸೇರಿದಂತೆ ಹಲವು ರಾಷ್ಟ್ರಗಳು ಪ್ರಯಾಣ ನಿರ್ಬಂಧ ಹೇರಿದೆ. ಆದರೆ ಹಲವು ರಾಷ್ಟ್ರಗಳ ಈ ಕ್ರಮದಿಂದಾಗಿ ರಾಮಫೋಸಾ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಯಾಣ ನಿರ್ಬಂಧದಿಂದ ತೀವ್ರ ಆಘಾತಗೊಂಡಿದ್ದೇನೆ. ದಕ್ಷಿಣ ಆಫ್ರಿಕಾ ವಿರುದ್ಧ ಬೇಧಭಾವದ ನೀತಿ ಅನುಸರಿಸಲಾಗುತ್ತಿದೆ. ಮುಖ್ಯವಾಗಿ ಪ್ರಯಾಣ ನಿರ್ಬಂಧಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಬದಲಾಗಿ ನಿರ್ಬಂಧದಿಂದ ಆರ್ಥಿಕತೆಯ ಮೇಲೆಯೇ ಪರಿಣಾಮ ಬೀರಲಿದೆ. ಆರ್ಥಿಕತೆಯ ಮೇಲೆ ಇನ್ನಷ್ಟು ಪ್ರಭಾವ ಬೀರುವ ಮುನ್ನ ನಿರ್ಬಂಧವನ್ನು ತೆರವುಗೊಳಿಸಬೇಕಿದೆ ಎಂದು ರಾಮಫೋಸಾ ತಿಳಿಸಿದ್ದಾರೆ.