ದ್ವೈವಾರ್ಷಿಕ ವಿಧಾನ ಪರಿಷತ್ ಚುನಾವಣೆ

ಸಂಜೆವಾಣಿ ವಾರ್ತೆ    ದಾವಣಗೆರೆ.ಮೇ.೪; ಚುನಾವಣಾ ಆಯೋಗವು ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದು ದಾವಣಗೆರೆ ಜಿಲ್ಲೆಯ ವ್ಯಾಪ್ತಿ ಹೊಂದಿರುವ ಆಗ್ನೇಯ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಕ್ಕೆ ಮೇ 9 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು  ಮತದಾರರ ನೊಂದಣಿಗೆ ಮೇ 6  ಕೊನೆಯ ದಿನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ವಿಧಾನ ಪರಿಷತ್ ಚುನಾವಣೆ ಕುರಿತು ಮಾಹಿತಿ ನೀಡುವ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಾವಣಗೆರೆ ಜಿಲ್ಲೆಯಲ್ಲಿ ಮೂರು ವಿಧಾನಸಭಾ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಆಯನೂರು ಮಂಜುನಾಥ್ ಅವರು ನೈರುತ್ಯ ಪದವೀಧರರ ಕ್ಷೇತ್ರದ ಸದಸ್ಯರಾಗಿದ್ದು ಏಪ್ರಿಲ್ 19 ರಂದು ರಾಜೀನಾಮೆ ನೀಡಿದ್ದರು. ಎಸ್.ಎಲ್.ಭೋಜೆಗೌಡ ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವೈ.ಎ.ನಾರಾಯಣಸ್ವಾಮಿಯವರು ಸದಸ್ಯರಾಗಿದ್ದು ಇವರ ಅವಧಿ ಜೂನ್ 21 ಕ್ಕೆ ಮುಕ್ತಾಯಗೊಳ್ಳುವುದರಿಂದ ಈ ಮೂರು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.ಮೇ 9 ರಂದು ಅಧಿಸೂಚನೆ ಪ್ರಕಟವಾಗಲಿದ್ದು ಮೇ 16 ರ ವರೆಗೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಮೇ 17 ರಂದು ನಾಮಪತ್ರಗಳ ಪರಿಶೀಲನೆ, ಮೇ 20 ರಂದು ನಾಮಪತ್ರಗಳ ವಾಪಸ್ ಪಡೆಯಲು ಕೊನೆಯ ದಿನವಾಗಿರುತ್ತದೆ. ಜೂನ್ 3 ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಮತ ಎಣಿಕೆಯು ಜೂನ್ 6 ರಂದು ನಡೆಯಲಿದ್ದು ಜೂನ್ 12 ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಬೆಂಗಳೂರು ಪ್ರಾದೇಶಿಕ ಆಯುಕ್ತರು ಚುನಾವಣಾಧಿಕಾರಿಗಳಾಗಿರುವರು ಮತ್ತು ನೈರುತ್ಯ ಶಿಕ್ಷಕರ, ಪದವೀಧರ ಕ್ಷೇತ್ರಕ್ಕೆ ಮೈಸೂರು ಪ್ರಾದೇಶಿಕ ಆಯುಕ್ತರು ಚುನಾವಣಾಧಿಕಾರಿಗಳಾಗಿದ್ದು ಜಿಲ್ಲಾಧಿಕಾರಿ ಸಹಾಯಕ ಚುನಾವಣಾಧಿಕಾರಿಯಾಗಿರುವರು.2023 ರ ಡಿಸೆಂಬರ್ ಅಂತ್ಯಕ್ಕೆ ಮತದಾರರ ವಿವರ;  ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಜಿಲ್ಲೆಯ ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕುಗಳು ಸೇರಲಿದ್ದು ಗಂಡು 2564, ಮಹಿಳೆ 1384 ಸೇರಿ 3948 ಮತದಾರರಿದ್ದಾರೆ. ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಜಿಲ್ಲೆಯ ನ್ಯಾಮತಿ, ಹೊನ್ನಾಳಿ, ಚನ್ನಗಿರಿ ತಾ; ಬಸವಪಟ್ಟಣ-1 ಮತ್ತು 2 ನೇ ಹೋಬಳಿ, ಸಂತೆಬೆನ್ನೂರು-1 ಮತ್ತು 2 ನೇ ಹೋಬಳಿ, ಚನ್ನಗಿರಿ ತಾ; ಕಸಬಾ, ಉಬ್ರಾಣಿ ಹೋಬಳಿ, ದೇವರಹಳ್ಳಿ ಸೇರಿ ಒಟ್ಟು ಗಂಡು 688, ಹೆಣ್ಣು 246 ಸೇರಿ ಒಟ್ಟು 934,  ನೈರುತ್ಯ ಪದವೀಧರರ ಕ್ಷೇತ್ರಕ್ಕೆ ನ್ಯಾಮತಿ, ಹೊನ್ನಾಳಿ, ಚನ್ನಗಿರಿ ತಾ; ಬಸವಪ್ಟಣ-1 ಮತ್ತು 2 ಹೋಬಳಿ, ಸಂತೆಬೆನ್ನೂರು 1 ಮತ್ತು 2, ಚನ್ನಗಿರಿ ತಾ; ಕಸಬಾ, ಉಬ್ರಾಣಿ ಹೋಬಳಿ, ದೇವರಹಳ್ಳಿ ಗ್ರಾಮ ಒಳಗೊಂಡಂತೆ 3900 ಗಂಡು, 2096 ಹೆಣ್ಣು ಸೇರಿ 6296 ಮತದಾರರಿದ್ದಾರೆ.