
ಮೈಸೂರು: ಏ.23:- ರಾಜಕೀಯ ದ್ವೇಷದಿಂದ ರಾಜಕಾರಣ ಮಾಡಿದರೆ ಜನರು ಒಪ್ಪುವುದಿಲ್ಲ ಎಂದು ವರುಣ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಆಗಮಿಸಿದ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು.
ದ್ವೇಷದ ರಾಜಕಾರಣವನ್ನು ಜನರು ಎಂದಿಗೂ ಒಪ್ಪುವುದಿಲ್ಲ. ವರುಣ ಕ್ಷೇತ್ರದ ಜನರಿಗೆ ನನ್ನ ಮೇಲೆ ಪ್ರೀತಿಯಿದೆ. ಜನರ ಮನಸ್ಸನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲವೆಂದರು. 1978 ರಿಂದಲೂ ನಾನು ವರುಣದಲ್ಲಿ ಸ್ಪರ್ಧೆ ಮಾಡಿದ್ದೇನೆ. ಇಲ್ಲಿನ ಜನ ನನ್ನನ್ನು ಕಾನ್ಫಿಡೆಂಟ್ ಆಗಿ ಇರಿ ಎಂದಿದ್ದಾರೆ. ವರುಣದಲ್ಲಿ ಬಿಜೆಪಿ ದ್ವೇಷದ ರಾಜಕೀಯ ಮಾಡುತ್ತಿದೆ ಬಿ.ಎಲ್. ಸಂತೋಷ್ ಬಗ್ಗೆ ನನಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಆರ್‍ಎಸ್‍ಎಸ್ ನವರು, ಬಿಜೆಪಿಯವರು ರಾಜಕೀಯ ದ್ವೇಷದಿಂದ ನನ್ನನ್ನು ಸೋಲಿಸಲೇಬೇಕು ಅಂತ ನಿಂತಿದ್ದಾರೆ. ಸಂತೋಷ್ ಅವರೇನು ಇಲ್ಲಿನ ಮತದಾರರಲ್ಲ. ವರುಣ ಕ್ಷೇತ್ರದ ಬಗ್ಗೆ ನನಗೆ ಆತಂಕ ಇದೆ ಎಂಬುದು ಸುಳ್ಳು. ಕೊನೆಯ ಎರಡು ದಿನ ಕೂಡ ಪ್ರಚಾರಕ್ಕೆ ಬರುತ್ತೇನೆ ಎಂದರು.
ಸಿದ್ದರಾಮಯ್ಯಗೆ ಭಯವಾಗಿದೆ ಎಂಬ ಪ್ರತಾಪ್ ಸಿಂಹ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರತಾಪ್ ಸಿಂಹ ಯಾರ್ರೀ, ತಿho is ಠಿಡಿಚಿಣhಚಿಠಿ Simhಚಿ? ಅವರಿಗೂ ವರುಣಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯಗೆ ಸೋಲುವ ಭೀತಿ ಎದುರಾಗಿದೆ ಎಂಬ ಸಿಎಂ ಬಸವರಾಜ ಬೊಮ್ಮಾಯಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಮೊದಲು ಅವರು ತಮ್ಮ ಕ್ಷೇತ್ರ ನೋಡಿಕೊಳ್ಳಲಿ ಹೇಳಿ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಅಬ್ಬರದ ಪ್ರಚಾರ
ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅಬ್ಬರದ ಪ್ರಚಾರ ನಡೆಸಿದರು.
ಸುತ್ತೂರು ಹೆಲಿಪ್ಯಾಡ್ ಗೆ ಆಗಮಿಸಿದ ಸಿದ್ದರಾಮಯ್ಯ ನಂತರ ಕಾರ್ಯ ಗ್ರಾಮದಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ಸಿದ್ದರಾಮಯ್ಯ ಅವರಿಗೆ ಗ್ರಾಮಸ್ಥರು ಹೂವಿನ ಮಳೆಗೈದರು.
ಸಿದ್ದರಾಮಯ್ಯ ಅವರೊಂದಿಗೆ ಶಾಸಕ ಡಾ. ಯತೀಂದ್ರ, ಚಿತ್ರನಟ ಸಾಧುಕೋಕಿಲ ಹಾಗು ಕಾಂಗ್ರೆಸ್ ಕಾರ್ಯಕರ್ತರು ಇದ್ದರು. ಗ್ರಾಮಕ್ಕೆ ಆಗಮಿಸಿದ ಸಿದ್ದರಾಮಯ್ಯ, ಮೊದಲಿಗೆ ಕಾರ್ಯ ಗ್ರಾಮದ ಸಿದ್ದೇಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಸಿದ್ದರಾಮೇಶ್ವರನ ದರ್ಶನ ಪಡೆದರು. 2013ರಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಿದ್ದ ಕಾಪು ಸಿದ್ದಲಿಂಗಸ್ವಾಮಿಯವರ ಸ್ವಗ್ರಾಮವಾಗಿದೆ.
ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ವೇಳೆ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂಬ ಕೂಗು ಮುನ್ನಲೆಗೆ ಬಂದಿತು. ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಸಿದ್ದು ಅಭಿಮಾನಿಗಳು ಕೂಗಿದರು.