ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜೂ.03: ತಾಲೂಕು ಕೇಂದ್ರದ ಹಾಗೂ ಎಲ್ಲಾ ಇಲಾಖೆಗಳ ಮಾತೃ ಇಲಾಖೆ ಎಂದೇ ಕರೆಯುವ ತಾಲೂಕ ಕಚೇರಿ ನಾನಾ ಕೆಲಸ ಕಾರ್ಯಗಳಿಗೆ ಆಗಮಿಸಿರುವ ಜನ ಇರುವುದು ಸಾಮಾನ್ಯ, ಆದರೆ ಕಚೇರಿಯ ಮುಂದೆ, ಒಳಗೆ, ಕಟ್ಟೆಯ ಮೇಲೆ ನಿಂತಿರುವ ದ್ವಿಚಕ್ರ ವಾಹನಗಳನ್ನು ನೋಡಿದರೆ, ಇದು ಕಚೇರಿಯೇ ಅಲ್ಲ ದ್ವಿಚಕ್ರವಾಹನ ನಿಲ್ದಾಣ ಎನ್ನುವಂತೆ ಕಾಣುತ್ತಿದೆ.
ತಾಲೂಕು ಕಚೇರಿಗೆ ನಿತ್ಯವೂ ಕಂದಾಯ ಇಲಾಖೆಯ ಕೆಲಸಗಳು ಸೇರಿದಂತೆ ಇತರೆ ನಾನಾ ಇಲಾಖೆಗಳ ಹತ್ತಾರು ಕೆಲಸಗಳನ್ನು ಹೊತ್ತು ಬರುವ ಜನರಿಗೆ ಕಚೇರಿಗೆ ಆಗಮಿಸಿದ ವೇಳೆ ತಮ್ಮ ವಾಹನಗಳನ್ನು ಇಂತಹದ್ದೇ ಸ್ಥಳದಲ್ಲಿ ಬಿಡುವ ಯಾವುದೇ ನಿಯಮಗಳು ತಾಲೂಕು ಕಚೇರಿಯಲ್ಲಿ ಇಲ್ಲವೇ ಇಲ್ಲ. ಸಾರ್ವಜನಿಕರು ತಮ್ಮ ವಾಹನಗಳನ್ನು ಎಲ್ಲಿಯಂದರೆ ಅಲ್ಲಿ ಬೇಕಾ ಬಿಟ್ಟಿ ಬಿಟ್ಟು ಹೋಗುವುದು ಸಾಮಾನ್ಯದ ಸಂಗತಿ.
ಇನ್ನೂ ಕಚೇರಿಯ ನಿಯಮ ಪಾಲಿಸುವ ಸಿಬ್ಬಂದಿಗಳ ಕಥೆಯೂ ಅಷ್ಠೇ. ಸಾರ್ವಜನಿಕರು ತಮ್ಮ ವಾಹನಗಳನ್ನು ಅವರಣದಲ್ಲಿ ಎಲ್ಲಿಯಂದರೆ ಅಲ್ಲಿ ಬಿಟ್ಟರೆ, ಸಿಬ್ಬಂದಿಗಳು ಇವರಿಗಿಂತಲೂ ಒಂದು ಕೈ ಜಾಸ್ತಿ ಎನ್ನುವ ಹಾಗೆ, ಕಚೇರಿಯ ಕಟ್ಟೆಯ ಮೇಲೇರಿಸಿ ಕಚೇರಿಯ ಕಟ್ಟಡದ ಹೊರಗಡೆಯ ತುಂಬ ವಾಹನಗಳದ್ದೇ ಕಾರುಬಾರು ಎನ್ನುವಂತಾಗಿದೆ. ಇನ್ನೂ ಕೆಲ ಸಿಬ್ಬಂದಿಗಳು ತಾವು ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ಕಚೇರಿಯ ಒಳಗೆ ತಮ್ಮ ದ್ವಿಚಕ್ರವಾಹನಗಳನ್ನು ನಿಲ್ಲಿಸುವುದು ಇಲ್ಲಿಯ ಮತ್ತೊಂದು ವಿಶೇಷ ವಾಹನ ನಿಲ್ಲುಗಡೆಯ ಸ್ಥಳವನ್ನಾಗಿಸಿಕೊಳ್ಳಲಾಗಿದೆ.
ಕಳೆದ ಕೆಲ ವರ್ಷಗಳ ಹಿಂದೆ ಐಎಎಸ್ ಅಧಿಕಾರಿ ಈಗೀನ ಜಿಲ್ಲಾ ಪಂಚಾಯ್ತಿ ಸಿಇಓ ರಾಹುಲ್‌ಸಂಕನೂರು ತರಭೇತಿ ಹಿನ್ನಲೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಕಚೇರಿಯ ಸಮೀಪದಲ್ಲಿ ಒಂದೇ ಒಂದು ವಾಹನ ಇಲ್ಲದೆ ರೀತಿಯಲ್ಲಿ ಕಚೇರಿಯ ಶಿಸ್ತುಪಾಲನೆ ಮಾಡಿದ್ದನ್ನು ಇಲ್ಲಿನ ಸಾರ್ವಜನಿಕರು ಇಂದಿಗೂ ಸ್ಮರಿಸುತ್ತಾರೆ.
ಅವರ ನಂತರ ಕಚೇರಿಯ ಸಿಬ್ಬಂದಿಗಳೇ ತಮ್ಮ ವಾಹನಗಳನ್ನು ನೆರಳಿನಲ್ಲಿ ನಿಲ್ಲಿಸುವ ಸಲುವಾಗಿ ಬೇಲಿಯೇ ಎದ್ದು ಹೊಲ ಮೈದಂತೆ ಕಚೇರಿಯ ಒಳಗೆ ವಾಹನಗಳನ್ನು ಬಿಟ್ಟರೆ. ಇನ್ನೂ ಸಾರ್ವಜನಿಕರಿಗೆ ಶಿಸ್ತು ಪಾಲನೆ ಮಾಡಿಸುವುವವರು ಯಾರು ಎನ್ನುವಂತಾಗಿದೆ.
ಕೇವಲ ಈ ಪರಿಸ್ಥಿತಿ ಒಂದು ಕಚೇರಿಗೆ ಮಾತ್ರ ಸೀಮಿತವಾಗಿಲ್ಲ ತಾಲೂಕು ಕಚೇರಿ ಅವರಣದಲ್ಲಿರುವ ಪ್ರತಿಯೊಂದು ಕಚೇರಿಯ ಸ್ಥಿತಿಯೂ ಅಷ್ಠಕ್ಕೆ ಅಷ್ಠೇ ಎನ್ನುವಂತಿದೆ.
ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡುವ ಉನ್ನತ್ತ ಕಚೇರಿಯಲ್ಲಿಯೇ ಶಿಸ್ತು ಪಾಲನೆಗೆ ಮುಂದಾಗದೆ ಎಲ್ಲಿ ಬೇಕಾಂದರೆ ಅಲ್ಲಿ ದ್ವಿಚಕ್ರವಾಹನಗಳ ನಿಲುಗಡೆಯಿಂದ ಕಚೇರಿಗೆ ಬರುವ ಉನ್ನತ ಅಧಿಕಾರಿಗಳ ವಾಹನ ನಿಲ್ಲುಗಡೆ ಅಥವಾ ಕಚೇರಿಗೆ ನಾನಾ ಕೆಲಸಗಳ ನಿಮಿತ್ತ ಬರುವ ವಯಸ್ಸಾದ ವೃದ್ಧರಿಗೆ ಸಂಚಾರ ಮಾಡಲು ಅವಕಾಶವಿಲ್ಲದಂತಾಗಿದೆ. ಈ ಬಗ್ಗೆ ತಹಸೀಲ್ದಾರ್‌ರು ಸೂಕ್ತ ಗಮನ ಹರಿಸಿ ದ್ವಿಚಕ್ರವಾಹನಗಳ ನಿಲುಗಡೆಗೆ ಸೂಕ್ತ ಸ್ಥಳ ನಿಗಧಿ ಮಾಡುವುದು ಸೂಕ್ತ.
ಓ.ಪಂಪಾಪತಿ, ಬಸವರೆಡ್ಡಿ, ಗೋವಿಂದ, ಸಾರ್ವಜನಿಕರು.