ದ್ವಿತೀಯ ಪಿಯು ಪರೀಕ್ಷೆ ರದ್ದು

ಬೆಂಗಳೂರು,ಜೂ.೪- ರಾಜ್ಯದಲ್ಲಿ ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಗಳು ರದ್ದಾಗಿವೆ. ಪರೀಕ್ಷೆ ಇಲ್ಲದೆ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಎಸ್‌ಎಸ್‌ಎಲ್‌ಸಿಗೆ ಪರೀಕ್ಷೆಗಳನ್ನು ನಡೆಸುವ ಮಹತ್ವದ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ. ಜುಲೈನಲ್ಲಿ ಎಸ್‌ಎಸ್‌ಎಲ್‌ಸಿಗೆ ಪರೀಕ್ಷೆಗಳು ಬಹು ಆಯ್ಕೆ ಮಾದರಿಯಲ್ಲಿ (ಮಲ್ಟಿಪಲ್ ಚಾಯ್ಸ್) ನಡೆಯಲಿದೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಟಿದ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಅವರು ಕೋವಿಡ್ ೨ನೇ ಅಲೆ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸು ಮಾಡುವ ತೀರ್ಮಾನ ಮಾಡಲಾಗಿದೆ. ಆದರೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬಹು ಆಯ್ಕೆ ಮಾದರಿಯಲ್ಲಿ ನಡೆಸುವ ತೀರ್ಮಾನ ಕೈಗೊಂಡಿದ್ದೇವೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿದರೂ ಯಾರನ್ನೂ ಅನುತ್ತೀರ್ಣ ಮಾಡಲಾಗುವುದಿಲ್ಲ. ಯಾರಿಗೂ ಭಯ ಬೇಡ ಎಂದು ಹೇಳಿದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಿ ಅವರು ಪ್ರಥಮ ಪಿಯುಸಿಯಲ್ಲಿ ಗಳಿಸಿದ ಅಂಕದ ಆಧಾರದ ಮೇಲೆ ಅಂಕಗಳನ್ನು ನೀಡಲು ನಿರ್ಧರಿಸಲಾಗಿದೆ. ಈ ಕುರಿತು ಪದವಿಪೂರ್ವ ಶಿಕ್ಷಣ ಇಲಾಖೆ ಮಾರ್ಗಸೂಚಿಗಳನ್ನು ಹೊರಡಿಸುತ್ತದೆ. ಒಂದು ವೇಳೆ ವಿದ್ಯಾರ್ಥಿಗೆ ಫಲಿತಾಂಶ, ಅಂಕ ತೃಪ್ತಿಯಾಗದಿದ್ದಲ್ಲಿ ಕೋವಿಡ್ ಅಲೆ ನಿಯಂತ್ರಣಕ್ಕೆ ಬಂದ
ನಂತರ ಇಲಾಖೆ ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಬಹುದು ಎಂದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಗ್ರೇಡಿಂಗ್ ಫಲಿತಾಂಶ ಜೂನ್ ಕೊನೆಯ ವಾರದಲ್ಲಿ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.
ಪ್ರಸ್ತುತ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಲು ನೋಂದಾಯಿಸಿಕೊಂಡ ಪುನರಾವರ್ತಿತ (ರಿಪಿಟರ್‍ಸ್) ವಿದ್ಯಾರ್ಥಿಗಳು ಹಾಗೂ ಖಾಸಗಿ ವಿದ್ಯಾರ್ಥಿಗಳಿಗೆ ಫಲಿತಾಂಶವನ್ನು ನೀಡಲು ಸ್ಪಷ್ಟ ದಾಖಲೆಗಳು ಲಭ್ಯವಿಲ್ಲದ ಕಾರಣ ಕೋವಿಡ್ ನಿಯಂತ್ರಣಕ್ಕೆ ಬಂದ ನಂತರ ಮುಂದಿನ ದಿನಗಳಲ್ಲಿ ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಇವರನ್ನು ಪರೀಕ್ಷೆ ಇಲ್ಲದೆ ಪಾಸು ಮಾಡಲ್ಲ ಎಂದರು.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಗ್ರೇಡಿಂಗ್ ನೀಡಲು ಕಷ್ಟವಾಗಿದೆ. ಕಾರಣ ಕಳೆದ ವರ್ಷ ೯ನೇ ತರಗತಿ ಪರೀಕ್ಷೆಗಳನ್ನು ನಡೆಸಿಲ್ಲ. ಆ ಕಾರಣಕ್ಕಾಗಿ ಗ್ರೇಡಿಂಗ್ ನೀಡಲು ಅನಿವಾರ್ಯವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಬಹು ಆಯ್ಕೆ (ಮಲ್ಟಿಪಲ್ ಚಾಯ್ಸ್) ಮೇಲೆ ನಡೆಯುತ್ತವೆ. ಎರಡು ಪರೀಕ್ಷೆ ಇರುತ್ತದೆ. ಭಾಷಾ ಪರೀಕ್ಷೆಗೆ ಒಂದು ಪ್ರಶ್ನೆ ಪತ್ರಿಕೆ ಮತ್ತು ಐಚ್ಛಿಕ ವಿಷಯಗಳಾದ ಸಮಾಜ, ಗಣಿತ ಮತ್ತು ವಿಜ್ಞಾನ ಇವುಗಳಿಗೆ ಒಂದು ಪ್ರಶ್ನೆ ಪತ್ರಿಕೆ ಇರುತ್ತದೆ ಎಂದರು.
ಎಸ್‌ಎಸ್‌ಎಲ್‌ಸಿಗೆ ನಡೆಯುವ ಎರಡು ವಿಷಯಗಳ ಪರೀಕ್ಷೆಯಲ್ಲಿ ಭಾಷಾ ವಿಷಯಗಳಾದ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಮೂರೂ ವಿಷಯಗಳನ್ನು ಸೇರಿಸಿ ಒಂದು ಪರೀಕ್ಷೆ, ಐಚ್ಛಿಕ ವಿಷಯಗಳಾದ ಗಣಿತ, ಸಮಾಜ, ವಿಜ್ಞಾನ ವಿಷಯಗಳೂ ಸೇರಿದಂತೆ ಎರಡೂ ಪರೀಕ್ಷೆಗಳು ನಡೆಯಲಿವೆ. ಪ್ರತಿ ವಿಷಯಕ್ಕೆ ತಲಾ ೪೦ ಅಂಕದಂತೆ ೧೨೦ ಅಂಕಗಳಿಗೆ ಪರೀಕ್ಷೆ ಇದ್ದು, ಪ್ರತಿ ಪ್ರಶ್ನೆಗೂ ೪ ಉತ್ತರಗಳಿರುತ್ತವೆ. ವಿದ್ಯಾರ್ಥಿಗಳು ಸರಿಯಾದ ಒಂದು ಉತ್ತರವನ್ನು ಆಯ್ಕೆ ಮಾಡಬೇಕು ಎಂದವರು ಹೇಳಿದರು.
ಈ ಪರೀಕ್ಷೆಗೆ ೩ ಗಂಟೆಯ ಕಾಲಾವಕಾಶ ನೀಡಲಾಗಿದೆ. ಪ್ರಶ್ನೆಗಳು ಸರಳ ಮತ್ತು ನೇರವಾಗಿ ಇರುತ್ತವೆ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗದಂತಹ ಸರಳ ಪ್ರಶ್ನೆಗಳನ್ನು ನೀಡಲಾಗುವುದು, ಭಾಷಾ ಪರೀಕ್ಷಾ ವಿಷಯಕ್ಕೂ ಇದೇ ಮಾದರಿ ಅನುಸರಿಸಲಾಗುತ್ತದೆ ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಯಾರನ್ನೂ ಫೇಲ್ ಮಾಡುವುದಕ್ಕೆ ನಡೆಸುತ್ತಿಲ್ಲ. ಎಲ್ಲರನ್ನೂ ಪಾಸ್ ಮಾಡಲಾಗುವುದು, ಮುಂದೆ ಪಿಯುಸಿಯಲ್ಲಿ ವಿಜ್ಞಾನ, ಕಾಮರ್ಸ್ ಮತ್ತು ಆರ್ಟ್ಸ್ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಪರೀಕ್ಷೆ ನಡೆಸುತ್ತಿದ್ದೇವೆ ಎಂದವರು ಸ್ಪಷ್ಟಪಡಿಸಿದರು.
ಜುಲೈ ಮೂರನೇ ವಾರದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿದ್ದು, ೨೦ ದಿನ ಮೊದಲೇ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ ಮಾಡುತ್ತೇವೆ, ಮಾದರಿ ಪ್ರಶ್ನೆ ಪತ್ರಿಕೆಯನ್ನು ಪ್ರಕಟಿಸಲಾಗುವುದು. ಪರೀಕ್ಷೆಗೆ ಹಾಜರಾಗುವ ಪ್ರತಿ ವಿದ್ಯಾರ್ಥಿಗೂ ಎನ್-೯೫ ಮಾಸ್ಕ್ ನೀಡಲಾಗುವುದು. ಪರೀಕ್ಷಾ ಮೇಲ್ವಿಚಾರಕರಿಗೆ ವ್ಯಾಕ್ಸಿನೇಷನ್ ಮಾಡುವುದಾಗಿ ಅವರು ಹೇಳಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ೮.೭೫ ಲಕ್ಷ ವಿದ್ಯಾರ್ಥಿಗಳು ಹಾಜರಾಗಲಿದ್ದು, ೬ ಸಾವಿರ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ, ಪ್ರತಿ ಕೊಠಡಿಯಲ್ಲೂ ೧೦-೧೨ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿ ಪ್ರತಿ ವಿದ್ಯಾರ್ಥಿಗೆ ೬ ಅಡಿ ಅಂತರ ಕಾಯ್ದುಕೊಂಡು, ಕೋವಿಡ್ ನಿಯಮಗಳನ್ನು ಪಾಲಿಸಲಾಗುವುದು ಎಂದರು.
ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಬೇಕೆಂಬ ಬಗ್ಗೆ ಚರ್ಚೆಗಳು ನಡೆದಿದ್ದವು. ಸಿಬಿಎಸ್‌ಇ ಯಲ್ಲಿ ಪಿರಿಯಾಡಿಕಲ್ ಪರೀಕ್ಷೆ ಇರುತ್ತದೆ. ರಾಜ್ಯ ಪರೀಕ್ಷೆಗಳಲ್ಲಿ ಆ ವ್ಯವಸ್ಥೆ ಇಲ್ಲ. ಹಾಗಾಗಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಡೆಸುವ ತೀರ್ಮಾನ ಮಾಡಿದೆವು ಮುಖ್ಯಮಂತ್ರಿಗಳು, ಸಚಿವರೊಂದಿಗೂ ಈ ಬಗ್ಗೆ ಚರ್ಚಿಸಿದ್ದೇನೆ. ಶಿಕ್ಷಣ ತಜ್ಞರು, ಹಿರಿಯ ಪತ್ರಕರ್ತರು ಎಲ್ಲರ ಜತೆ ಚರ್ಚಿಸಿ ಈ ತೀರ್ಮಾನ ಕೈಗೊಂಡಿರುವುದಾಗಿ ಹೇಳಿದರು.
ವಲಸೆ ಹೋದ ವಿದ್ಯಾರ್ಥಿಗಳು ಅವರು ಇರುವ ಊರಿನಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಆಗಸ್ಟ್‌ನಲ್ಲಿ ಫಲಿತಾಂಶ
ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಜುಲೈ ೩ನೇ ವಾರದಲ್ಲಿ ನಡೆಯಲಿದ್ದು, ಫಲಿತಾಂಶಗಳನ್ನು ಆಗಸ್ಟ್‌ನಲ್ಲಿ ಪ್ರಕಟಿಸುವುದಾಗಿ ಸಚಿವ ಸುರೇಶ್ ಕುಮಾರ್ ಹೇಳಿದರು.
ಸುದ್ದಿಗೋಷ್ಠಿಂiiಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್, ಪಿಯು ಮಂಡಳಿ ನಿರ್ದೇಶಕಿ ಆರ್. ಸ್ನೇಹಲ್ ಉಪಸ್ಥಿತರಿದ್ದರು.

ದ್ವಿತೀಯ ಪಿಯುಸಿ ಪರೀಕ್ಷೆ ರದ್ದು,

ಪರೀಕ್ಷೆ ಇಲ್ಲದೆ ಎಲ್ಲರ ತೇರ್ಗಡೆ.

ಎಸ್‌ಎಸ್‌ಎಲ್‌ಸಿಗೆ ಪರೀಕ್ಷೆ.

ಬಹು ಆಯ್ಕೆ ಮಾದರಿಯಲ್ಲಿ (ಮಲ್ಟಿಪಲ್ ಚಾಯ್ಸ್) ಎಸ್‌ಎಸ್‌ಎಲ್‌ಸಿ ಪರೀಕ್ಷೆ.

ಪ್ರಥಮ ಪಿಯುಸಿ ಅಂಕ ಆಧರಿಸಿ ದ್ವಿತೀಯ ಪಿಯುಸಿ ಅಂಕ ನಿಗದಿ.

ಅಂಕ ತೃಪ್ತಿಯಾಗದಿದ್ದಲ್ಲಿ ಮುಂದಿ ಪರೀಕ್ಷೆ ಬರೆಯಲು ಅವಕಾಶ.

ಎಸ್‌ಎಸ್‌ಎಲ್‌ಸಿಗೆ ಜುಲೈನಲ್ಲಿ ಪರೀಕ್ಷೆ, ಆಗಸ್ಟ್‌ನಲ್ಲಿ ಫಲಿತಾಂಶ.

ಜೂನ್ ೨೫ರ ಹೊತ್ತಿಗೆ ಪಿಯು ಗ್ರೇಡಿಂಗ್ ಫಲಿತಾಂಶ.