ದ್ವಿತೀಯ ಪಿಯುಸಿ ಪರೀಕ್ಷೆ ಶಾಂತಿಯುತವಾಗಿ, ಸುವ್ಯವಸ್ಥಿತವಾಗಿ ಏರ್ಪಡಿಸಿ- ಜಿಲ್ಲಾಧಿಕಾರಿ


ಗದಗ,ಫೆ.28: ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಗಳು ಮಾರ್ಚ 9 ರಿಂದ 29 ರವರೆಗೆ ಜರುಗಲಿದ್ದು ಪರೀಕ್ಷೆಗಳು ಸುವ್ಯವಸ್ಥಿತವಾಗಿ, ಶಾಂತಿಯುತವಾಗಿ ಜರುಗುವಂತೆ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ 22 ಪರೀಕ್ಷಾ ಕೇಂದ್ರಗಳಲ್ಲಿ ಮಾರ್ಚ 9 ರಿಂದ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳು ಜರುಗುತ್ತಿದ್ದು ಪರೀಕ್ಷಾ ಸಮಯದಲ್ಲಿ ನಕಲು ಮಾಡುವುದು, ಪರೀಕ್ಷಾರ್ಥಿಗಳ ಬದಲು ಬೇರೆಯವರು ಪರೀಕ್ಷೆ ಗೆ ಹಾಜರಾಗುವುದು ಮುಂತಾದ ಅವ್ಯವಹಾರ ತಡೆಗಟ್ಟಲು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಶಿಸ್ತು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬ ವೀಕ್ಷಕರನ್ನು, ಮಾರ್ಗಾಧಿಕಾರಿಗಳನ್ನು ಮತ್ತು ತ್ರಿಸದಸ್ಯರೊಳಗೊಂಡ ಪ್ರಶ್ನೆ ಪತ್ರಿಕಾ ಪಾಲಕರ ಮತ್ತು ದೃಢೀಕರಿಸುವವರ ಸಮಿತಿಯನ್ನು ರಚಿಸಲಾಗಿದೆ. ಪರೀಕ್ಷಾ ಕೊಠಡಿಗಳಲ್ಲಿ ಸಾಕಷ್ಟು ಗಾಳಿ, ಬೆಳಕು, ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳು ಇರುವಂತೆ ಕ್ರಮ ಜರುಗಿಸಬೇಕು ಎಂದರು. ಪರಿವೀಕ್ಷಕರು ಪರೀಕ್ಷಾ ಕೊಠಡಿಗೆ ಆಗಮಿಸುವ ಪರೀಕ್ಷಾರ್ಥಿಗಳ ಪ್ರವೇಶ ಪತ್ರ ಪರಿಶೀಲಿಸಿ ವಿನಾ ಕಾರಣ ವಿಳಂಬ ಮಾಡದೇ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು ಎಂದರು.
ಪರೀಕ್ಷಾ ಕೊಠಡಿಗಳಲ್ಲಿ ಸಮಯ ಪರಿಪಾಲನೆ ಮಾಡಲು ಗೋಡೆ ಗಡಿಯಾರ ಅಳವಡಿಸಬೇಕು. ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಆಗಮಿಸುವ ಸಮಯ ಮತ್ತು ಹೊರಹೋಗುವ ಸಮಯದಲ್ಲಿ ಮಾತ್ರ ಚಿತ್ರೀಕರಿಸಲು ಮಾಧ್ಯಮದವರಿಗೆ ಅವಕಾಶವಿದ್ದು, ಪರೀಕ್ಷಾ ಗೌಪ್ಯತೆ ದೃಷ್ಟಿಯಿಂದ ಪರೀಕ್ಷಾ ಕೊಠಡಿಗಳಲ್ಲಿ ಪ್ರವೇಶ, ಚಿತ್ರೀಕರಣ ಇತ್ಯಾದಿಗಳನ್ನು ನಿಷೇಧಿಸಿದೆ. ಒಟ್ಟಾರೆಯಾಗಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಿಷ್ಪಕ್ಷಪಾತವಾಗಿ, ಪಾರದರ್ಶಕವಾಗಿ ನಡೆಸುವಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕರಿಸಿದ್ಧಪ್ಪ ಎಸ್.ಜಿ. ಅವರು ಮಾತನಾಡಿ ಜಿಲ್ಲೆಯ 22 ಪರೀಕ್ಷಾ ಕೇಂದ್ರಗಳಲ್ಲಿ ಮಾರ್ಚ 9 ರಿಂದ 29 ರವರೆಗೆ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳು ಜರುಗುತ್ತಿದ್ದು ಪರೀಕ್ಷೆಗಳು ಸುಗಮವಾಗಿ, ಶಾಂತಿಯುತವಾಗಿ ಜರುಗಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ., ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವಲಿಂಗಪ್ಪ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ತಹಶೀಲ್ದಾರರುಗಳು, ಜಿಲ್ಲಾ ಖಜಾನಾಧಿಕಾರಿ ಸಿದ್ಧರಾಮೇಶ್ವರ ವಿ.ಟಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಮಹಬೂಬ ತುಂಬರಮಟ್ಟಿ, ಪರೀಕ್ಷಾ ಕೇಂದ್ರದ ಮುಖ್ಯಸ್ಥರುಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಪ್ರತಿಬಂಧಕಾಜ್ಞೆ ಜಾರಿ : ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಗಳು ಮಾರ್ಚ 9 ರಿಂದ ಮಾರ್ಚ 29 ರವರೆಗೆ ಬೆಳಿಗ್ಗೆ 10.15 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಜರುಗಲಿವೆ. ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳು ಸುಗಮವಾಗಿ ಜರುಗಲು ಮತ್ತು ಶಿಸ್ತು , ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲೆಯ 22 ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ಪರಿಮಿತಿಯೊಳಗೆ ಮಾರ್ಚ 9 ರಿಂದ 29 ರವರೆಗೆ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2.30 ಗಂಟೆಯವರೆಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಕ್ಯಾಮರಾ ಹೊಂದಿರದ ಸಾಮಾನ್ಯ ಮೊಬೈಲ್ ಇರಿಸಿಕೊಳ್ಳಲು ಅವಕಾಶವಿದ್ದು ಉಳಿದ ಎಲ್ಲ ಪರೀಕ್ಷಾ ಸಿಬ್ಬಂದಿ / ವಿದ್ಯಾರ್ಥಿಗಳು ಮೊಬೈಲ್ ಫೋನ್ ಮತ್ತು ಇತರೇ ಸಂಪರ್ಕ ಸಲಕರಣೆಗಳನ್ನು ತರುವುದನ್ನು / ಉಪಯೋಗಿಸುವುದನ್ನು ನಿಷೇಧಿಸಲಾಗಿದೆ.

ಜಿಲ್ಲೆಯಲ್ಲಿನ 22 ಪರೀಕ್ಷಾ ಕೇಂದ್ರಗಳು:
ಗದಗನ ಜ.ತೋಂಟದಾರ್ಯ ಪದವಿ ಪೂರ್ವ ಕಾಲೇಜು , ವಿ.ಡಿ.ಎಸ್.ಬಾಲಕಿಯರ ಪದವಿ ಪೂರ್ವ ಕಾಲೇಜ , ನಗರಸಭೆ ಪದವಿ ಪೂರ್ವ ಕಾಲೇಜು, ಎಚ್.ಸಿ.ಇ.ಎಸ್. ಪದವಿ ಪೂರ್ವ ಕಾಲೇಜು, ಕೆ.ವಿ.ಎಸ್.ಆರ್. ಸಂಯುಕ್ತ ಪದವಿ ಪೂರ್ವ ಕಾಲೇಜ್, ಎ.ಎಸ್.ಎಸ್. ಪದವಿ ಪೂರ್ವ ಕಾಲೇಜು ಗದಗ-ಬೆಟಗೇರಿ, ಮೈಲಾರಪ್ಪ ಮೆಣಸಗಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು, ಲೋಯಲಾ ಸಂಯುಕ್ತ ಪದವಿ ಪೂರ್ವ ಕಾಲೇಜು. ಗಜೇಂದ್ರಗಡ ತಾ. ನರೇಗಲ್‍ದ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜು, ಎಸ್.ಎಂ. ಭೂಮರಡ್ಡಿ ಪದವಿ ಪೂರ್ವಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು. ನರಗುಂದದ ಸರ್ಕಾರಿ ಪದವಿ ಪೂರ್ವ ಕಾಲೇಜು, ಲಯನ್ಸ ಪದವಿ ಪೂರ್ವ ಕಾಲೇಜು,
ಮುಂಡರಗಿಯ ಜೆ.ಎ. ಪದವಿ ಪೂರ್ವ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು ಶಿರಹಟ್ಟಿಯ ಎಫ್. ಎಂ. ಡಬಾಲಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು. ರೋಣದ ಕಿತ್ತೂರು ಚೆನ್ನಮ್ಮ ಪದವಿ ಪೂರ್ವ ಕಾಲೇಜು, ಶರಣಬಸವೇಶ್ವರ ಪದವಿ ಪೂರ್ವ ಕಾಲೇಜು ಲಕ್ಷ್ಮೇಶ್ವರದ ಬಿ.ಸಿ.ಎನ್.ಪದವಿ ಪೂರ್ವ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು.

ತ್ರಿಸದಸ್ಯ ಪ್ರಶ್ನೆ ಪತ್ರಿಕೆ ಪಾಲಕರ ಸಮಿತಿ ರಚನೆ :
ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಗಳು ಸುಗಮವಾಗಿ, ಶಾಂತಿಯುತವಾಗಿ ಜರುಗಲು ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಶಿಸ್ತು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಪ್ರತಿ ಪರೀಕ್ಷಾ ಕೇಂದ್ರಕ್ಕೆ ವೀಕ್ಷಕರನ್ನು, ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ. ಅಪರ ಜಿಲ್ಲಾಧಿಕಾರಿಗಳು, ಜಿಲ್ಲಾ ಖಜಾನಾಧಿಕಾರಿಗಳು ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರನ್ನೊಳಗೊಂಡ ತ್ರಿ ಸದಸ್ಯ ಪ್ರಶ್ನೆ ಪತ್ರಿಕೆ ಪಾಲಕರ ಸಮಿತಿಯನ್ನೂ ಸಹ ರಚಿಸಲಾಗಿದೆ.