ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಲು ಮನವಿ

ದಾವಣಗೆರೆ. ಜೂ.೩; ಕೊವಿಡ್ ಎರಡನೇ ಅಲೆಯ ತೀವ್ರತೆಯ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಸಿಬಿಎಸ್ಇ ಹತ್ತನೇ ಮತ್ತು ಹನ್ನೆರಡನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿದೆ. ನಮ್ಮ ರಾಜ್ಯ ಸರ್ಕಾರ ಇನ್ನೂ ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯು ಪರೀಕ್ಷೆಗಳನ್ನು ಸಧ್ಯಕ್ಕೆ ಮುಂದೂಡಿದ್ದು, ಇನ್ನೂ ಪರೀಕ್ಷೆ ಕುರಿತು ನಿರ್ದಿಷ್ಟ ನಿರ್ಧಾರ ಕೈಗೊಂಡಿಲ್ಲ. ಸಿಬಿಎಸ್ಇ ಪರೀಕ್ಷೆಗಳ ಮಾದರಿಯಲ್ಲಿಯೇ ರಾಜ್ಯ ಸರ್ಕಾರ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಎಐಡಿಎಸ್ ಒ  ಜಿಲ್ಲಾ ಸಮಿತಿ ಸದಸ್ಯರು ಆನ್ ಲೈನ್ ಪ್ರತಿಭಟನೆ ನಡೆಸಿದರು. ಪರೀಕ್ಷೆಯ ಬಗೆಗಿನ ಗೊಂದಲ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಒತ್ತಡ ಹೇರುತ್ತದೆ. ಜೊತೆಗೆ, ಕೋವಿಡ್ ಸಾಂಕ್ರಾಮಿಕ ಇದೀಗ ಗ್ರಾಮಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆ ಸಹ ಹೆಚ್ಚುತ್ತಲೇ ಇದೆ. ಮುಂದಿನ ದಿನಗಳಲ್ಲಿ ಸರ್ಕಾರ ಪರೀಕ್ಷೆ ನಡೆಸಲು ನಿರ್ಧರಿಸಿದರೂ ಕೆಲವು ದಿನಗಳು ತರಗತಿ ನಡೆಸಿಯೇ ಪರೀಕ್ಷೆ ನಡೆಸಬೇಕು ಆದರೆ ಮುಂದೆ ಮೂರನೇ ಅಲೆಯ ಅಪಾಯ ಗಮನದಲ್ಲಿ ಇಟ್ಟುಕೊಂಡು, ತರಗತಿ ಅಥವಾ ಪರೀಕ್ಷೆ ನಡೆಸುವುದು ಕಷ್ಟಸಾಧ್ಯ ಆದ್ದರಿಂದ ಪರೀಕ್ಷೆಗಳನ್ನು ರದ್ದುಗೊಳಿಸಿ, ಅನುಭವಿ ಶಿಕ್ಷಕರು ಹಾಗೂ ಶಿಕ್ಷಣ ತಜ್ಞರ ಸಲಹೆ ಮೇರೆಗೆ ಒಂದು ವೈಜ್ಞಾನಿಕ ಮೌಲ್ಯಮಾಪನ ಪದ್ಧತಿ ರಚಿಸಿ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ವೇಳೆ ಹಲವು ವಿದ್ಯಾರ್ಥಿಗಳು ಆನ್‌ಲೈನ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.