ದ್ವಿಚಕ್ರ ವಾಹನಕ್ಕೆ ಕಾರ್ ಡಿಕ್ಕಿ: ಸವಾರ ಗಂಭೀರ

ಮಂಗಳೂರು, ಮೇ ೨೭- ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ಉರುಳಿಬಿದ್ದ ಘಟನೆ ನಗರದ ಪಂಪ್‌ವೆಲ್‌ನಲ್ಲಿರುವ ಫ್ಲೈಓವರ್ ನಲ್ಲಿ ಇಂದು (ಗುರುವಾರ) ಬೆಳಗ್ಗೆ ೭ ಗಂಟೆ ಸುಮಾರಿಗೆ ಸಂಭವಿಸಿದೆ.


ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರದ ಗೋರಿಗುಡ್ಡ ಕಡೆಯಿಂದ ನಂತೂರು ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನ ಫ್ಲೈಓವರ್ ಮೇಲೆ ಸಂಚರಿಸುತ್ತಿದ್ದ ವೇಳೆ ಕಾರು ಹಿಂದಿನಿಂದ ಬಂದು ಢಿಕ್ಕಿ ಹೊಡೆದಿದೆಯೆನ್ನಲಾಗಿದೆ. ಇದರಿಂದ ರಸ್ತೆಗೆಸೆಯಲ್ಪಟ್ಟ ದ್ವಿಚಕ್ರ ವಾಹನ ಸವಾರ ತೀವ್ರವಾಗಿ ಗಾಯಗೊಂಡಿದ್ದಾರೆ. ಢಿಕ್ಕಿ ಹೊಡೆದ ರಭಸಕ್ಕೆ ಕಾರು ಅಪಘಾತ ನಡೆದ ಸ್ಥಳದಿಂದ ಸುಮಾರು ೫೦ ಮೀ. ದೂರದವರೆಗೆ ಚಲಿಸಿ ಬಳಿಕ ಉರುಳಿಬಿದ್ದಿದೆ. ಕಾರಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.