ದ್ವಿಚಕ್ರವಾಹನ ಕಳ್ಳನ ಸೆರೆ: ಮೂರು ಬೈಕ್‍ಗಳು ಜಪ್ತಿ

ಕಲಬುರಗಿ.ಮೇ.31: ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರವಾಹನದಲ್ಲಿ ಬಂದ ವ್ಯಕ್ತಿಯನ್ನು ಸಂಚಾರಿ ಠಾಣೆಯ ಪೋಲಿಸರು ಹಿಡಿದು ವಿಚಾರಣೆ ಮಾಡಿದಾಗ ಆತ ಮೂರು ದ್ವಿಚಕ್ರವಾಹನಗಳನ್ನು ಕಳ್ಳತನ ಮಾಡಿದ ಪ್ರಕರಣಗಳು ಪತ್ತೆಯಾದವು. ಪೋಲಿಸರು ಆತನಿಗೆ ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧಿತನಿಗೆ ಶಿವಾಜಿನಗರದ ಫಿಲ್ಟರ್ ಬೆಡ್‍ನ ವಿಠು ನಾಯಕ್ ಶಾಲೆ ಹತ್ತಿರದ ನಿವಾಸಿ ಲಕ್ಷ್ಮಣ್ ಅಲಿಯಾಸ್ ಸುಭಾಷ್ ಪವಾರ್ (20) ಎಂದು ಗುರುತಿಸಲಾಗಿದೆ. ಬಂಧಿತನಿಂದ ಮೂರು ದ್ವಿಚಕ್ರವಾಹನಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.
ಬ್ರಹ್ಮಪೂರ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪಿಎಸ್‍ಐ ಅಶೋಕ್ ನಿಡೋದೆ, ಸಿಬ್ಬಂದಿಗಳಾದ ಕೇಸುರಾಯ್, ಸಂತೋಷಕುಮಾರ್, ಕಲ್ಯಾಣಕುಮಾರ್ ಅವರು ಮಂಗಳವಾರ ಬೆಳಿಗ್ಗೆ 11-30ಕ್ಕೆ ನಗರದ ಟೇಕ್ ಬುರಾನ್ ದರ್ಗಾದ ಹತ್ತಿರ ದ್ವಿಚಕ್ರವಾಹನಗಳನ್ನು ಪರಿಶೀಲನೆ ಮಾಡುತ್ತಿದ್ದಾಗ ಲಾಲ್‍ಗಿರಿ ಕ್ರಾಸ್‍ನಿಂದ ಒಬ್ಬ ವ್ಯಕ್ತಿ ನಂಬರ್ ಪ್ಲೇಟ್ ಇಲ್ಲದ ಹಿರೋ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರವಾಹನವನ್ನು ತೆಗೆದುಕೊಂಡು ಬರುವಾಗ ಪೋಲಿಸರನ್ನು ನೋಡಿ ವಾಹನವನ್ನು ತಿರುಗಿಸಿಕೊಂಡು ಹೋಗುವಾಗ ಸಿಬ್ಬಂದಿಯವರು ಆತನಿಗೆ ಹಿಡಿದು ವಿಚಾರಿಸಿದಾಗ ದ್ವಿಚಕ್ರವಾಹನಗಳ ಕಳ್ಳತನ ಪತ್ತೆಯಾಯಿತು.
ವಿಚಾರಣೆಯ ವೇಳೆ ಬ್ರಹ್ಮಪೂರ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಮೂರು ದ್ವಿಚಕ್ರವಾಹನಗಳ ಕಳ್ಳತನ ಪ್ರಕರಣಗಳನ್ನು ಬಂಧಿತನು ಒಪ್ಪಿಕೊಂಡ. ಆತನಿಂದ 60,000ರೂ.ಗಳ ಬೆಲೆ ಬಾಳುವ ಮೂರು ದ್ವಿಚಕ್ರವಾಹನಗಳನ್ನು ಪೋಲಿಸರು ವಶಪಡಿಸಿಕೊಂಡರು. ಈ ಕುರಿತು ಪೋಲಿಸ್ ಆಯುಕ್ತ ಆರ್. ಚೇತನ್ ಅವರು ಪೋಲಿಸರ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.