ದ್ವಿಚಕ್ರವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ಯುವಕನ ಸೆರೆ

ಕಲಬುರಗಿ:ಮಾ.29:ದ್ವಿಚಕ್ರವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ಯುವಕನೋರ್ವನಿಗೆ ಪೋಲಿಸರು ಬಂಧಿಸಿದ ಘಟನೆ ಜಿಲ್ಲೆಯಲ್ಲಿ ಸೋಮವಾರ ವರದಿಯಾಗಿದೆ. ಬಂಧಿತನಿಗೆ ಅಫಜಲಪುರ ತಾಲ್ಲೂಕಿನ ಸಿನ್ನೂರ್ ಗ್ರಾಮದ ನಿವಾಸಿ ಮಲ್ಲಿಕಾರ್ಜುನ್ ತಂದೆ ದೇವಿಂದ್ರಪ್ಪ ಸಗರ್ (21) ಎಂದು ಗುರುತಿಸಲಾಗಿದೆ.
ಬಂಧಿತನಿಂದ ಗಾಂಜಾ ಸಾಗಾಟಕ್ಕೆ ಬಳಸಲಾದ 25000ರೂ.ಗಳ ಮೌಲ್ಯದ ಒಂದು ದ್ವಿಚಕ್ರವಾಹನ, ಒಂದು ಮೊಬೈಲ್ ಹಾಗೂ ದ್ವಿಚಕ್ರವಾಹನದಲ್ಲಿದ್ದ 5000ರೂ.ಗಳ ಮೌಲ್ಯದ 1 ಕಿಲೋ 800 ಗ್ರಾಮ್ ತೂಕದ ಗಾಂಜಾವನ್ನು ಕ್ರೈಂ ಪೋಲಿಸರು ವಶಪಡಿಸಿಕೊಂಡಿದ್ದಾರೆ.
ಆಳಂದ್ ತಾಲ್ಲೂಕಿನಿಂದ ನಗರದ ಕಡೆಗೆ ಗಾಂಜಾವನ್ನು ದ್ವಿಚಕ್ರವಾಹನದ ಮೇಲೆ ತೆಗೆದುಕೊಂಡು ಹೋಗುತ್ತಿರುವ ಕುರಿತು ಖಚಿತ ಭಾತ್ಮಿ ಪಡೆದ ಸಿಎನ್‍ಇ ಕ್ರೈಂ ಪೋಲಿಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕ ಎ.ಎಸ್. ಪಟೇಲ್, ಸಿಬ್ಬಂದಿಗಳಾದ ಸಿದ್ದಪ್ಪ, ಅಶೋಕ್, ಭೀಮಾಶಂಕರ್, ಸಂತೋಷ್, ಗಜಾನಂದ್, ಬಸವರಾಜ್ ಅವರು ಆಳಂದ್ ತಾಲ್ಲೂಕಿನ ಕಡಗಂಚಿ ಬಳಿ ಕಾರ್ಯಾಚರಣೆ ಮಾಡಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದರು. ತಂಡದ ಕಾರ್ಯಾಚರಣೆಗೆ ಮೇಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.