ದ್ರೌಪದಿ ರಾಷ್ಟ್ರಪತ್ನಿ ಎಂದು ಜರಿದ ಚೌಧರಿ ಸಂಸತ್‌ನಲ್ಲಿ ಕೋಲಾಹಲ

ನವದೆಹಲಿ, ಜು. ೨೮- ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು “ರಾಷ್ಟ್ರಪತ್ನಿ” ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಎಂದು ಜರಿದಿದ್ದು, ಸಂಸತ್ತಿನ ಉಭಯ ಸದನಗಳಲ್ಲಿ ಇಂದು ಪ್ರತಿಧ್ವನಿಸಿ ಭಾರಿ ಕೋಲಾಹಲಕ್ಕೆ ಕಾರಣವಾಗಿ ಉಭಯ ಸದನಗಳನ್ನು ಭೋಜನ ವಿರಾಮದವರೆಗೆ ಮುಂದೂಡಲಾಯಿತು.
ಇದೇ ವೇಳೆ ರಾಜ್ಯಸಭೆಯಲ್ಲಿ ಇನ್ನೂ ೩ ಸದಸ್ಯರನ್ನು ಅಮಾನತು ಮಾಡಲಾಗಿದೆ. ಎರಡು ಸದನಗಳಲ್ಲಿ ಒಟ್ಟು ೨೭ ಮಂದಿ ಸಂಸದರನ್ನು ಅಮಾನತು ಮಾಡಿದಂತಾಗಿದೆ.
ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಸಚಿವೆ ಸ್ಮೃತಿ ಇರಾನಿ ಮಾತನಾಡಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಕರೆಯುವ ಮೂಲಕ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಅವಮಾನ ಮಾಡಿದ್ದಾರೆ. ಕೂಡಲೇ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.
ರಾಷ್ಟ್ರಪತ್ನಿ ಪದವನ್ನು ಬಳಸಿ, ಮುರ್ಮು ಮತ್ತು ಅವರ ಕಚೇರಿಯನ್ನು ಅವಮಾನಿಸಿದ್ದಾರೆ. ಇದು ದೇಶದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ಒಂದೆಡೆ ಬೆಲೆಯೇರಿಕೆ ಹಾಗೂ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ತೆರಿಗೆ ವಿಧಿಸಿರುವ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದು ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದರೆ, ಇಂದು ಅಧೀರ್ ರಂಜನ್ ಹೇಳಿಕೆ ಮುಂದಿಟ್ಟುಕೊಂಡು ಆಡಳಿತ ಪಕ್ಷದ ಸದಸ್ಯರು ಒತ್ತಾಯಿಸಿದ್ದರಿಂದ ಸದನದಲ್ಲಿ ಗದ್ದಲ, ಕೋಲಾಹಲ ಉಂಟಾಯಿತು.
ಅಧೀರ್ ರಂಜನ್ ಈಗಾಗಲೇ ಕ್ಷಮೆಯಾಚಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಹೇಳಿಕೆ ನೀಡಿದ್ದಾರೆಂದು ಹೇಳಿದರು. ಆಡಳಿತ ಪಕ್ಷದ ಸದಸ್ಯರು ಕ್ಷಮೆಯಾಚನೆಗೆ ಪಟ್ಟು ಹಿಡಿದರು.
ವಿವಾದಾತ್ಮಕ ಹೇಳಿಕೆ ನೀಡಿರುವ ಅಧೀರ್ ರಂಜನ್ ನಾಲಿಗೆ ಹೊರಡಿ ರಾಷ್ಟ್ರಪತ್ನಿ ಎಂದು ಸಂಭೋದಿಸಿದ್ದೇನೆ. ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು. ಆದರೆ ಗದ್ದಲ ಮುಂದುವರಿದಿದ್ದರಿಂದ ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಲಾಯಿತು. ಈ ಮಧ್ಯೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಅಧೀರ್ ರಂಜನ್ ಕ್ಷಮೆಯಾಚನೆಗೆ ಒತ್ತಾಯಿಸಿದರು.
ಇದೇವೇಳೆ ರಾಜ್ಯಸಭೆಯಲ್ಲೂ ರಾಷ್ಟ್ರಪತ್ನಿ ಹೇಳಿಕೆ ವಿಚಾರ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಆಡಳಿತ ಪ್ರತಿಪಕ್ಷಗಳ ನಡುವೆ ಭಾರೀ ವಾಗ್ವಾದ ನಡೆಯಿತು. ಇದರಿಂದಾಗಿ ಕಲಾಪಕ್ಕೆ ಅಡ್ಡಿಯುಂಟಾಯಿತು. ಈ ಹಿನ್ನೆಲೆಯಲ್ಲಿ ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಲಾಯಿತು.
ಇದೇ ವೇಳೆ ರಾಜ್ಯಸಭೆ ಕಲಾಪದಿಂದ ಮೂವರು ಸಂಸದರನ್ನು ಅಮಾನತು ಮಾಡಲಾಗಿದೆ. ಆಮ್ಮ್ ಆದ್ಮಿ ಪಕ್ಷದ ಸುಶೀಲ್ ಕುಮಾರ್ ಗುಪ್ತಾ, ಸಂದೀಪ್ ಕುಮಾರ್ ಪಾಠಕ್, ಪಕ್ಷೇತರ ಸಂಸದ ಅಜಿತ್ ಕುಮಾರ್ ಭುಯಾನ್ ಅವರನ್ನು ಅಮಾನತು ಮಾಡಲಾಗಿದೆ.