ದ್ರೌಪದಿ ಮುರ್ಮು ಅವರಿಗೆ ರಾಷ್ಟ್ರಪತಿ,‌ ಪ್ರಧಾನಿ ಸೇರಿ ಗಣ್ಯರ ಶುಭ ಹಾರೈಕೆ

ನವದೆಹಲಿ, ಜು.21- ದೇಶದ 15 ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ಆದಿವಾಸಿ ಪ್ರಥಮ ಮಹಿಳೆ ಎನ್ ಡಿ ಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ರಾಷ್ಟ್ರಪತಿ,ಉಪರಾಷ್ಟ್ರಪತಿ ,ಪ್ರಧಾನಿ‌ ಸೇರಿ ಗಣ್ಯರಿಂದ ಶುಭಾಷಯಗಳ ಮಹಾ ಪೂರ ಹರಿದು ಬಂದಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಮ್ಮ ಸಂದೇಶದಲ್ಲಿ ಭಾರತದ 15 ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರಿಗೆ ಶುಭಾಷಯಗಳು ಎಂದು ತಿಳಿಸಿದ್ದಾರೆ.

ಉಪ ರಾಷ್ಟ್ರಪತಿ ವೆಂಕಯ್ಯ‌ನಾಯ್ಡು ಅವರು, ರಾಷ್ಟಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರಸಾರ್ವಜನಿಕ ಜೀವನದಲ್ಲಿ ಅವರ ವ್ಯಾಪಕ ಅನುಭವ, ನಿಸ್ವಾರ್ಥ ಸೇವೆಯ ಮನೋಭಾವ ಮತ್ತು ಜನರ ಸಮಸ್ಯೆಗಳ ಆಳವಾದ ತಿಳುವಳಿಕೆಯು ರಾಷ್ಟ್ರಕ್ಕೆ ಹೆಚ್ಚು ಪ್ರಯೋಜನ ನೀಡಲಿದೆ. ಯಶಸ್ವಿ ಅಧಿಕಾರಾವಧಿಗೆ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಅತ್ಯುತ್ತಮ‌ ರಾಷ್ಟ್ರಪತಿ : ಪಿಎಂ ವಿಶ್ವಾಸ

ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅಭಿನಂದನೆಗಳು. ಶಾಸಕ ಮತ್ತು ಸಚಿವರಾಗಿ ಹಾಗು ಜಾರ್ಖಂಡ್ ರಾಜ್ಯಪಾಲರಾಗಿ ಅತ್ಯುತ್ತಮ ಅಧಿಕಾರಾವಧಿಯನ್ನು ಹೊಂದಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಗುಣಗಾನ ಮಾಡಿದ್ದಾರೆ.

ಭಾರತದ ಅಭಿವೃದ್ಧಿ ಪಯಣವನ್ನು ಬಲಪಡಿಸುವ ಅತ್ಯುತ್ತಮ ರಾಷ್ಟ್ರಪತಿಯಾಗುತ್ತಾರೆ ಎಂದು ನನಗೆ ಖಾತ್ರಿಯಿದೆ.ದ್ರೌಪದಿ ಮುರ್ಮು ಅವರ ಜೀವನ, ಅವರ ಆರಂಭಿಕ ಹೋರಾಟಗಳು, ಅವರ ಶ್ರೀಮಂತ ಸೇವೆ ಮತ್ತು ಅವರ ಅನುಕರಣೀಯ ಯಶಸ್ಸು ಪ್ರತಿಯೊಬ್ಬ ಭಾರತೀಯರನ್ನು ಪ್ರೇರೇಪಿಸುತ್ತದೆ.ವಿಶೇಷವಾಗಿ ಬಡವರು, ಅಂಚಿನಲ್ಲಿರುವವರು ಮತ್ತು ದೀನದಲಿತರಿಗೆ ಭರವಸೆಯ ಕಿರಣವಾಗಿ ಹೊರಹೊಮ್ಮಿದ್ದಾರೆ ಎಂದಿದ್ದಾರೆ.

ದ್ರೌಪದಿ ಮುರ್ಮು ಅವರ ಉಮೇದುವಾರಿಕೆಯನ್ನು ಬೆಂಬಲಿಸಿದ ಎಲ್ಲಾ ಸಂಸದರು ಮತ್ತು ಶಾಸಕರಿಗೆ ಪಕ್ಷಾತೀತವಾಗಿ ಧನ್ಯವಾದ ಹೇಳಲು ಬಯಸುತ್ತೇನೆ. ದಾಖಲೆಯ ಗೆಲುವು ನಮ್ಮ ಪ್ರಜಾಪ್ರಭುತ್ವ ಶುಭ ಸೂಚಕ ಎಂದಿದ್ದಾರೆ.

ಪ್ರಜಾಪ್ರಭುತ್ವದ ಯಶಸ್ಸಿನ‌ ಸಂಕೇತ

ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಆಯ್ಕೆಯಾಗಿ ಹೊಸ ದಾಖಲೆ ಬರೆದ ದ್ರೌಪದಿ ಮುರ್ಮು ಅವರಿಗೆ ಹಾರ್ದಿಕ ಅಭಿನಂದನೆಗಳು. ಸಮಾಜದ ಕೆಳಸ್ತರದಿಂದ ಬಂದು ರಾಷ್ಟ್ರದ ಪರಮೋನ್ನತ ಹುದ್ದೆಯನ್ನು ಅವರು ಅಲಂಕರಿಸುತ್ತಿರುವುದು ನಮ್ಮ ಪ್ರಜಾಪ್ರಭುತ್ವದ ಯಶಸ್ಸಿನ ಸಂಕೇತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭ ಹಾರೈಸಿದ್ದಾರೆ.

ಈ ನೂತನ ಹುದ್ದೆಯಲ್ಲಿ ಅವರಿಗೆ ಸಕಲ ಯಶಸ್ಸು ಕೋರಿ, ಅವರ ಅನುಭವ ಸಂಪತ್ತು, ಮುತ್ಸದ್ಧಿತನದ ಪ್ರಯೋಜನ ದೇಶಕ್ಕೆ ದೊರಕುವಂತಾಗಲಿ ಎಂದು ಆಶಿಸಿದ್ದಾರೆ