ದ್ರಾಕ್ಷಿ – ಗೋಡಂಬಿ ತಿನ್ನೋಕೆ ಬಂದಿದ್ದೀರಾ?: ಸಚಿವ ಪ್ರಿಯಾಂಕ್ ಪ್ರಶ್ನೆ

ಕಲಬುರಗಿ,ಜು 8: ಸಭೆಗೆ ಅಗತ್ಯವಿರುವ ದಾಖಲೆಗಳನ್ನು ತರದೆ ಕೇವಲ ಸರಕಾರದ ದ್ರಾಕ್ಷಿ-ಗೋಡಂಬಿ ತಿನ್ನೋಕೆ ಬರುತ್ತೀರಾ? ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಇಂದಿಲ್ಲಿ ನಡೆಯಿತು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಕಲಬುರಗಿ ನಗರಕ್ಕೆ ನಿರಂತರ ನೀರು ಸರಬರಾಜು ಮಾಡುವ ರೂ.837 ಕೋಟಿ ಅಂದಾಜು ಮೊತ್ತದ ಕಾಮಗಾರಿಯನ್ನು ಎಲ್ ಅಂಡ್ ಟಿ ಸಂಸ್ಥೆ ಕೈಗೊಳ್ಳುತ್ತಿದೆ. ಸಂಸ್ಥೆ ವತಿಯಿಂದ ನಗರದಾದ್ಯಂತ 1400 ಕಿ.ಮೀ. ವ್ಯಾಪ್ತಿಗೆ ಪೈಪ್ ಲೈನ್ ಅಳವಡಿಸುವಾಗ ಕಳಪೆ ಗುಣಮಟ್ಟದ ಪೈಪ್ ಅಳವಡಿಸಲಾಗುತ್ತಿದೆ. ಟೆಕ್ಸ್ ಮೋ ಕಂಪನಿಯ ಪೈಪ್ ಗುಣಮಟ್ಟ ಸರಿಯಿಲ್ಲ ಎಂದು ಈಗಾಗಲೇ ಬೆಳಗಾವಿ ಮತ್ತು ಧಾರವಾಡದಲ್ಲಿ ಈ ಪೈಪ್ ಅಳವಡಿಕೆ ನಿಲ್ಲಿಸಲಾಗಿದೆ. ಹೀಗಿದ್ದರೂ ಕಲಬುರಗಿ ನಗರದಲ್ಲಿ ಇದೇ ಕಂಪನಿಯ ಎಚ್.ಡಿ.ಪಿ.ಇ ಪೈಪ್ ಬಳಸಲಾಗುತ್ತಿದೆ. ಇದರ ಹಿಂದಿರುವ ಕಾರಣ ಏನು? ಎಂದು ಸಚಿವ ಪ್ರಿಯಾಂಕ್ ಅಚ್ಚರಿ ವ್ಯಕ್ತಪಡಿಸಿದರು.
ಈ ಹಂತದಲ್ಲಿ ಪೈಪ್ ಗುಣಮಟ್ಟದ ಕುರಿತು ಖಾತ್ರಿಗಾಗಿ ಹೈದರಾಬಾದಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಮಂಡಳಿಯ ಸೂಪರಿಂಟೆಂಡೆಂಟ್ ಇಂಜಿನಿಯರ್ ಕಾಂತರಾಜ್ ಸಮಜಾಯಿಷಿ ನೀಡುತ್ತಿದ್ದಂತೆಯೇ, ಈ ನಿಟ್ಟಿನಲ್ಲಿ ಥರ್ಡ್ ಪಾರ್ಟಿ ವರದಿ ತೋರಿಸಿ ಎಂದು ಸಚಿವ ಪ್ರಿಯಾಂಕ್ ತಾಕೀತು ಮಾಡಿದರು. ಈ ಹಂತದಲ್ಲಿ ರಿಪೆÇೀರ್ಟ್ ತಂದಿಲ್ಲ ಎಂದು ಇಂಜಿನಿಯರ್ ಪ್ರತಿಕ್ರಿಯಿಸುತ್ತಿದ್ದಂತೆಯೇ, ರಿಪೆÇೀರ್ಟ್ ಇಲ್ಲದೆ ಸಭೆಗೆ ಸರಕಾರದ ದ್ರಾಕ್ಷಿ- ಗೋಡಂಬಿ ತಿನ್ನೋಕೆ ಬಂದಿದ್ದೀರಾ? ಎಂದು ಪ್ರಿಯಾಂಕ್ ಖಾರವಾಗಿ ಪ್ರಶ್ನಿಸಿದರು.
ಇದೇ ಹಂತದಲ್ಲಿ ಮಹಾನಗರ ಪಾಲಿಕೆಯ ಕಮಿಷನರ್ ಭುವನೇಶ್ ಅವರನ್ನು ಉದ್ದೇಶಿಸಿ, ” ಸಚಿವರು ಮತ್ತು ಶಾಸಕರು ಸಭೆ ನಡೆಸುವುದಕ್ಕೂ ಮುಂಚೆ ನೀವ್ಯಾಕೆ ಅಧಿಕಾರಿಗಳ ಸಭೆ ಕೈಗೊಂಡು ಸಭೆಗೆ ಬರುವಾಗ ಅಗತ್ಯ ರಿಪೆÇೀರ್ಟ್ ತರುವಂತೆ ತಾಕೀತು ಮಾಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.ಶಾಸಕ ಅಲ್ಲಮಪ್ರಭು ಪಾಟೀಲ್ ಮಧ್ಯೆ ಪ್ರವೇಶಿಸಿ, ಬಡಾವಣೆಗಳಲ್ಲಿ ವಾರಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಆ ನೀರು ಸಹ ಅತ್ಯಂತ ಗಲೀಜಾಗಿರುತ್ತದೆ. ಹೀಗಾಗಿ ಜನರ ಅಸಮಾಧಾನಕ್ಕೆ ಹೆದರಿ ಶಾಸಕರಾದ ತಾವು ಮತ್ತು ನಗರ ಪಾಲಿಕೆ ಸದಸ್ಯರು ಮನೆಗಳಿಂದ ಹೊರಗೆ ಬರಲು ಭಯ ಪಡುವಂತಾಗಿದೆ ಎಂದರು.
ಮತ್ತೊಂದೆಡೆ, ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಅವರು ಮಧ್ಯೆ ಪ್ರವೇಶಿಸಿ, ವಾರಕ್ಕೊಮ್ಮೆ ನೀರು ಬಂದರೂ ಒತ್ತಡವೇ (ಫೆÇೀರ್ಸ್) ಇರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್, ಒಂದುವೇಳೆ ಕಾಮಗಾರಿಯ ಗುಣಮಟ್ಟ ಮತ್ತು ಪಾರದರ್ಶಕತೆಗೆ ಒತ್ತು ನೀಡದೆ ಹೋದರೆ ಎಲ್ ಅಂಡ್ ಟಿ ಸಂಸ್ಥೆಗೆ ನೀಡಿರುವ ಟೆಂಡರ್ ರದ್ದುಪಡಿಸಿ ಸರಕಾರವೇ ಕಾಮಗಾರಿಯನ್ನು ಮುಂದುವರೆಸುವ ಕುರಿತು ಪರಿಶೀಲಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅಗತ್ಯ ಎನಿಸಿದರೆ ಸಂಪುಟ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತಿ ಸಿಇಒ ಬನ್ವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಕಮಿಷನರ್ ಭುವನೇಶ್ ಪಾಟೀಲ್, ಅಪರ ಜಿಲ್ಲಾಧಿಕಾರಿ ರಾಚಪ್ಪ ವೇದಿಕೆಯಲ್ಲಿದ್ದರು.


ಜನರ ದೂರುಗಳಿಗೆ ಸ್ಪಂದಿಸಿ
ಕಲಬುರಗಿ ನಗರದಲ್ಲಿ ನೀರು ಸರಬರಾಜಿಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರು ಸಲ್ಲಿಸಿದರೆ ತಕ್ಷಣ ದೂರು ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ ಅಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.


15 ದಿನಗಳ ಡೆಡ್ ಲೈನ್
ಕಲಬುರಗಿ ನಗರಕ್ಕೆ ನಿರಂತರ ನೀರು ಸರಬರಾಜು ಮಾಡುವ ಕಾಮಗಾರಿ ಮತ್ತು ನೀರು ಪೂರೈಕೆಯಲ್ಲಿ ಮುಂದಿನ 15 ದಿನದೊಳಗೆ ಅಗತ್ಯ ಸುಧಾರಣೆ ಆಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಡೆಡ್ ಲೈನ್ ನೀಡಿದರು.ಒಂದುವೇಳೆ ಈ ನಿಟ್ಟಿನಲ್ಲಿ ಮುಂದಿನ 15 ದಿನದೊಳಗೆ ಅಗತ್ಯ ಕ್ರಮ ಕೈಗೊಳ್ಳದೆ ಹೋದರೆ ಕ್ರಮ ಜರುಗಿಸುವುದು ಅನಿವಾರ್ಯ ಆಗಲಿದೆ ಎಂದು ಎಚ್ಚರಿಕೆ ನೀಡಿದರು.