ವಿದ್ಯಾರ್ಥಿಗಳೆ ಶಿಕ್ಷಕರಿಗೆ ಪ್ರಶ್ನೆ ಕೇಳಿರಿ, ಜ್ಞಾನವಂತರಾಗುವಿರಿ : ಎಸ್. ಎಸ್.

ಕಲಬುರಗಿ:ನ.5:ತರಗತಿಗಳಲ್ಲಿ ಶಿಕ್ಷಕರಿಗಿಂತ ಹೆಚ್ಚು ಪ್ರಶ್ನೆಗಳನ್ನು ಮಕ್ಕಳು ಶಿಕ್ಷಕರಿಗೆ ಕೇಳಬೇಕು. ಶಿಕ್ಷಕರು ಹೇಳಿದ್ದನ್ನು ಅರ್ಥ ಮಾಡಿಕೊಳ್ಳದೆ, ವೈಜ್ಞಾನಿಕವಾಗಿ ಪರೀಕ್ಷಿಸದೆ ಒಪ್ಪಿಕೊಳ್ಳಬಾರದು, ಎಂದು ಸಿದ್ದಪ್ಪ ಭಗವತಿ ಹೇಳಿದರು.
ನಗರದ ವಿವೇಕಾನಂದ ವಿದ್ಯಾ ನೀತನ ಶಾಲೆಯಲ್ಲಿ, ಶಿಕ್ಷಣ ಇಲಾಖೆ ವತಿಯಿಂದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟಕರಾಗಿ ವಿವೇಕಾನಂದ ವಿದ್ಯಾ ನೀತನ ಶಾಲೆಯ ಪ್ರಿನ್ಸಿಪಾಲ್ ಸಿದ್ದಪ್ಪ ಭಗವತಿ ಆಗಮಿಸಿದ್ದರು. ವಿಜ್ಞಾನ ವಿಷಯದ ವಿದ್ಯಾರ್ಥಿಗೆ ಕುತೂಹಲದ ಜೊತೆಗೆ ವೈಜ್ಞಾನಿಕ ಮನೋಭಾವವಿರಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.
ಶಿಕ್ಷಣ ಸಂಯೋಜಕ ಶಿವಮೂರ್ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಬಹುಮಾನ ಬರಲೆಂದು ಭಾಗವಹಿಸದೆ, ಕಲಿಕೆಗೊಂದು ಉತ್ತಮ ಅವಕಾಶವೆಂದು ಭಾವಿಸಿ ಭಾಗವಹಿಸಬೇಕು. ಪ್ರಾಮಾಣಿಕ ಪ್ರಯತ್ನವಿರಬೇಕು, ಅಂತಹ ವಿದ್ಯಾರ್ಥಿಗಳಿಗೆ ಯಶಸ್ಸು ಹಿಂಬಾಲಿಸಿ ಬರುತ್ತದೆ ಎಂದರು.
ಸ್ಪರ್ಧೆಯಲ್ಲಿ ಕಲಬುರಗಿ ದಕ್ಷಿಣ ವಲಯದಿಂದ ಭಾಗವಹಿಸಿದ ಹದಿನಾಲ್ಕು ಶಾಲೆಗಳಲ್ಲಿ, ಎಸ್. ಆರ್.ಎನ್. ಮೆಹತಾ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ವರ್ಗದಲ್ಲಿ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯ ವಿಜ್ಞಾನ ಶಿಕ್ಷಕಿ ಸುಮಾ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಸ್ಪರ್ಧೆಗಳ ತೀರ್ಪುಗಾರರಾಗಿ ವಿಜ್ಞಾನ ಶಿಕ್ಷಕರಾದ ಅರುಣಾ ದೇಸಾಯಿ ಹಾಗೂ ಸಂತೋಷ ಕುಲಕರ್ಣಿ ಆಗಮಿಸಿದ್ದರು.
ಸಂಗೀತ ಶಿಕ್ಷಕ ಮಲ್ಲಿಕಾರ್ಜುನ ಜವಳಗಿ ಪ್ರಾರ್ಥನಾ ಗೀತೆ ಹಾಡಿದರು. ಶಿಕ್ಷಣ ಸಂಯೋಜಕ ಶಿವಮೂರ್ತಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.