ದೌರ್ಜನ್ಯ ತಡೆ, ವಾಸ್ತವಾಂಶ ಪರಿಗಣಿಸಿ

ಸುಪ್ರೀಂ ಸೂಚನೆ
ನವದೆಹಲಿ, ಮೇ.೧೫-ಎಸ್ಸಿ, ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ ಕಠಿಣವಾಗಿದ್ದು, ಯಾವುದೇ ದೂರಿಗೆ ಸಂಬಂಧಿಸಿ ವಾಸ್ತವಾಂಶಗಳನ್ನು ಪರ್ಯಾಲೋಚಿಸದೇ ಯಾಂತ್ರಿಕವಾಗಿ ಈ ಕಾಯ್ದೆಯಡಿ ಪ್ರಕರಣ ದಾಖಲಿಸಬಾರದು ಎಂದು ಸುಪ್ರೀಂಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ.
ಬೆಂಗಳೂರು ವ್ಯಕ್ತಿಯೊಬ್ಬರ ಮೇಲೆ ದಾಖಲು ಮಾಡಲಾಗಿದ್ದ ಎಸ್ಸಿ, ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ ಅರ್ಜಿಯೊಂದರ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ ಹಾಗೂ ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ನ್ಯಾಯಪೀಠ, ತಮ್ಮ ಮುಂದಿರುವ ಪ್ರಕರಣಕ್ಕೆ ಕಾಯ್ದೆಯ ನಿಬಂಧನೆಗಳು ಮೇಲ್ನೋಟಕ್ಕೆ ಅನ್ವಯವಾಗುತ್ತವೆ ಎಂಬುದು ಸಂಬಂಧಪಟ್ಟ ಅಧಿಕಾರಿಗೆ ಮನದಟ್ಟಾಗಬೇಕು ಎಂದು ಉಲ್ಲೇಖಿಸಿದರು.
ಅಲ್ಲದೆ, ಇಂತಹ ಕಾಯ್ದೆ ಆರೋಪಿ ಮೇಲೆ ಗಂಭೀರ ಪರಿಣಾಮ ಬೀರುವಂಥದ್ದಾಗಿದೆ. ಹೀಗಾಗಿ, ಯಾವುದೇ ದೂರಿಗೆ ಸಂಬಂಧಿಸಿ ವಾಸ್ತವಾಂಶಗಳನ್ನು ಪರ್ಯಾಲೋಚಿಸದೇ ಯಾಂತ್ರಿಕವಾಗಿ ಈ ಕಾಯ್ದೆಯಡಿ ಪ್ರಕರಣ ದಾಖಲಿಸಬಾರದು ಎಂದು ಸೂಚನೆ ನೀಡಿ ಜಿ.ಎಂ. ಇನ್‌ಫನೈಟ್ ಡ್ವೆಲ್ಲಿಂಗ್ (ಇಂಡಿಯಾ) ಪೈ.ಲಿಮಿಟೆಡ್ ಎಂಬ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಗುಲಾಮ್ ಮುಸ್ತಫಾ ಎಂಬುವವರ ವಿರುದ್ಧ ಬೆಂಗಳೂರು ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಅನ್ನು ವಜಾಗೊಳಿಸಿ ಅವರ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಿದೆ.
ಏನಿದು ಪ್ರಕರಣ: ಬೆಂಗಳೂರು ನಗರದಲ್ಲಿ ಜಮೀನು ಅಭಿವೃದ್ಧಿಪಡಿಸುವುದಕ್ಕೆ ಸಂಬಂಧಿಸಿ ವೆಂಕಟೇಶ್ ಎಂಬುವವರೊಂದಿಗೆ ಕಂಪನಿಯು ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದದಂತೆ ತನಗೆ ಪರಿಹಾರ ಸಿಗಲಿಲ್ಲ ಎಂದು ದೂರಿ ವೆಂಕಟೇಶ್ ಅವರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮುಸ್ತಫಾ ವಿರುದ್ಧ ಸಿವಿಲ್ ದೂರು ದಾಖಲಿಸಿದ್ದರು. ನಂತರ, ಮುಸ್ತಫಾ ವಿರುದ್ಧ ವಂಚನೆ, ಫೋರ್ಜರಿ ಹಾಗೂ ಎಸ್‌ಸಿ-ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿದ್ದರು.ಈ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮುಸ್ತಫಾ ಅವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇನ್ನೂ, ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಇಸ್ಮಾಯೀಲ್ ಜಬೀವುಲ್ಲಾ ವಾದ ಮಂಡನೆ ಮಾಡಿದ್ದರು.