ದೌರ್ಜನ್ಯ ತಡೆಗಟ್ಟಲು ಪೋಲಿಸ್‍ರಿಗೆ ನಾಗರಿಕರ ಬೆಂಬಲ ಅಗತ್ಯ: ಲಕ್ಷ್ಮೀ ನಾರಾಯಣ

ವಿಜಯಪುರ, ಮಾ.23-ಸಮಾಜದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಅತ್ಯಾಚಾರ, ಶೋಷಣೆಯಂತಹ ಪ್ರಕರಣಗಳನ್ನು ತಡೆಗಟ್ಟಲು ಪೋಲಿಸ್‍ರಿಗೆ ನಾಗರಿಕರ ಬೆಂಬಲ ಅಗತ್ಯವಾಗಿದೆ ಎಂದು ವಿಜಯಪುರ ಡಿ.ವಾಯ್.ಎಸ್.ಪಿ. ಕೆ.ಸಿ. ಲಕ್ಷ್ಮೀ ನಾರಾಯಣ ಹೇಳಿದರು.
ಅವರು ವಿಜಯಪುರ ತಾಲೂಕಿನ ಆಹೇರಿ ಗ್ರಾಮದಲ್ಲಿ ಜಿಲ್ಲಾ ಪೋಲಿಸ್ ಇಲಾಖೆ ಗ್ರಾಮೀಣ ಪೋಲಿಸ್ ಠಾಣಾ ವಿಜಯಪುರ ಹಾಗೂ ಆಹೇರಿ ಶ್ರೀ ಬಸವೇಶ್ವರ ಕರ್ಮವೀರ ಕಲಾ, ಸಾಹಿತ್ಯ, ಸಂಸ್ಕøತಿಕ ವೇದಿಕೆಯ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪೋಲಿಸ್ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪೋಲಿಸರ ಬಗ್ಗೆ ಯಾವತ್ತು ಯಾರು ಭಯಪಡಬೇಕಾದ ಅಗತ್ಯವಿಲ್ಲ. ನಮ್ಮ ಪ್ರಜ್ಞಾವಂತ ಸಮಾಜದಲ್ಲಿ ನಿತ್ಯನಿರಂತರವಾಗಿ ನಡೆಯುತ್ತಿರುವ ಅಪರಾಧ ಪ್ರಕರಣಗಳು ಅಹಿತಕರ ಘಟನೆಗಳು ಕಳ್ಳತನ, ದರೋಡೆ, ಮಧ್ಯಪಾನ, ಮಾದರ ಸೇವನೆ, ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಅತ್ಯಾಚಾರ ಬಲತ್ಕಾರ ಶೋಷಣೆ, ಬಾಲ್ಯವಿವಾಹ, ವರದಕ್ಷಣ ಪಿಡುಗು, ಲೈಂಗಿಕ ಕಿರುಕುಳ ಹೀಗೆ ಸಮಾಜದಲ್ಲಿ ಒಂದಿಲ್ಲ ಒಂದು ಅಶಾಂತಿ ತೋರುವ ಘಟನೆಗಳು ನಡೆಯುತ್ತಿವೆ. ಇಂತಹ ಸಮಾಜಘಾತುಕ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು ಪೋಲಿಸರ ಗಮನಕ್ಕೆ ತಂದಲ್ಲಿ ಅವರನ್ನು ಕಾನೂನು ಪ್ರಕಾರ ನಿರ್ಧಾಕ್ಷಣವಾಗಿ ಕ್ರಮ ಜರುಗಿಸಲಾಗುವುದು. ಇದಕ್ಕೆಲ್ಲಾ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ವಿಜಯಪುರ ಗ್ರಾಮೀಣ ವೃತದ ಸಿ.ಪಿ.ಆಯ್. ಸಂಗಮೇಶ ಪಾಲಭಾವಿ ಮಾತನಾಡಿ, ಸಮಾಜದಲ್ಲಿ ಕಾನೂನು ಸೂವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಮಾಜದಲ್ಲಿನ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಪೋಲಿಸರ ಗಮನಕ್ಕೆ ನೀಡುವ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸಲು ಪೋಲಿಸ್‍ರೊಂದಿಗೆ ಕೈಜೋಡಿಸಬೇಕು. ಗ್ರಾಮೀಣ ಭಾಗದಲ್ಲಿ ಹಲವಾರು ಯುವಜನರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು. ನಾಗರಿಕ ಸಮಾಜ ಇಂತಹ ವ್ಯಕ್ತಿಗಳನ್ನು ಸರಿ ದಾರಿಗೆ ತರುವಲ್ಲಿ ಪೋಲಿಸ್ ಇಲಾಖೆ ಗಮನಕ್ಕೆ ತರಬೇಕಾಗದದ್ದು ಆದ್ಯ ಕರ್ತವ್ಯವಾಗಿದೆ. ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿರುವ ಈ ಸಭೆ ಅತ್ಯಂತ ಮಹತ್ವ ಪಡೆದಿದೆ. ಇಂದು ಮಹಿಳೆಯರಿಗೆ ಸಮಾಜ ಮತ್ತು ಸರ್ಕಾರ ಸಾಮಾಜಿಕ ಸ್ಥಾನ ಮಾನ ನೀಡುವುದರ ಮೂಲಕ ಅವರನ್ನು ಮುಖ್ಯ ವಾಹಿನಿಗೆ ತರಬೇಕೆಂದರು.
ಪ್ರಾಸ್ತಾವಿಕವಾಗಿ ಆಹೇರಿ ಶ್ರೀ ಬಸವೇಶ್ವರ ಕರ್ಮವೀರ ಕಲಾ, ಸಾಹಿತ್ಯ, ಸಂಸ್ಕøತಿ ವೇದಿಕೆ ಅಧ್ಯಕ್ಷ ಬಂಡೆಪ್ಪ ತೇಲಿ ಮಾತನಾಡಿ, ನಮ್ಮ ವೇದಿಕೆಯಿಂದ ಗ್ರಾಮೀನ ಭಾಗದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಲ್ಲಿ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಕಾನೂನು ಸೂವ್ಯವಸ್ಥೆ ಹಾಗೂ ಶಾಂತಿ ನೆಲೆಸಲು ಈ ಸಮಾರಂಭವನ್ನು ಏರ್ಪಡಿಸಲಾಗಿದ್ದು. ಪೋಲಿಸರು ಸಮಾಜದ ಅನೇಕ ಕಠೀಣ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಸಮಾಜದ ದೇಶದ ಸಾರ್ವಜನಿಕರ ಕೆಲಸ ಮಾಡುತ್ತಾರೆ. ಕರ್ನಾಟಕದ ಪೋಲಿಸ್ ಕಾರ್ಯ ದೇಶದಲ್ಲಿ ಮಾದರಿಯಾಗಿದೆ. ಇಲ್ಲಿನ ಪೋಲಿಸ್‍ರ ಕಾರ್ಯ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಸಮಾಜದ ಶಾಂತಿ ಪಾಲನೆಯಲ್ಲಿ ಪೋಲಿಸರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಆಹೇರಿ ಬಂಥನಾಳ ವಿರಕ್ತಮಠದ ಶ್ರೀ ಚಿಲ್ಲಾಲಿಂಗ ಮಹಾಸ್ವಾಮಿಗಳು ಸಮಾರಂಭದ ಸಾನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯತಿ ಅಧ್ಯಕ್ಷ ಬಸವರಾಜ ಚ. ತೇಲಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಬಸವರಾಜ ವಿಜಯಪುರ, ಹಣಮಂತ ದೊಡ್ಡಮನಿ, ಹಣಮಂತ ತೇಲಿ, ಅನೀಲ ಹಾದಿಮನಿ, ಬಸವರಾಜ ಶಿವಣಗಿ, ಕೆಂಚಪ್ಪ ಶಿಂಘೆ, ಮಲ್ಲನಗೌಡ ಬಿರಾದಾರ, ಸಿದ್ದು ಬಿಸನಾಳ, ರವಿ ಹಡಗಲಿ, ಮಹಿಬೂಬ ಹಿಟ್ನಳ್ಳಿ, ರುದ್ರಗೌಡ ಬಿರಾದಾರ, ಮಡಿವಾಳಪ್ಪ ಡೋಣೂರ, ಜಾನಪ್ಪ ಸಂದಿಮನಿ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ಪದಕ ಪಡೆದ ಡಿ.ವಾಯ್.ಎಸ್.ಪಿ. ಕೆ.ಸಿ. ಲಕ್ಷ್ಮೀ ನಾರಾಯಣರವರಿಗೆ ಹಾಗೂ ನೂತನ ಗ್ರಾಮ ಪಂಚಾಯತಿ ಸದಸ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಚೇತನ ಪಟ್ಟಣಶೆಟ್ಟಿ ಸ್ವಾಗತಿಸಿದರು. ಕಲ್ಲಪ್ಪ ಹಡಗಲಿ ನಿರೂಪಿಸಿದರು. ಬಲಭೀಮ ಕರಜಗಿ ವಂದಿಸಿದರು.