ದೌರ್ಜನ್ಯದಲ್ಲಿ ನೊಂದ ಪರಿಶಿಷ್ಟ ಜಾತಿ,ಪಂಗಡದ ಸಂತ್ರಸ್ತರಿಗೆ 75.36 ಲಕ್ಷ ರೂ.ಗಳ ಪರಿಹಾರಧನ ವಿತರಣೆ

ವಿಜಯಪುರ, ಮಾ.24-ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನೊಂದ ಸಂತ್ರಸ್ತರಿಗೆ ಜಿಲ್ಲಾಡಳಿತದಿಂದ ಒಟ್ಟು 75.36 ಲಕ್ಷ ರೂ.ಗಳ ಪರಿಹಾರ ಧನ ವಿತರಿಸಲಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಸಿದ ಜಿಲ್ಲಾಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಈ ವಿಷಯ ತಿಳಿಸಲಾಗಿದೆ.
ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಒಟ್ಟು 59 ಪ್ರಕರಣಗಳ ಪೈಕಿ 48 ಪ್ರಕರಣಗಳಲ್ಲಿ ಜಿಲ್ಲೆಯಲ್ಲಿ 2020 ರ ಎಪ್ರೀಲ್ 1 ರಿಂದ 2021 ರ ಫೆಬ್ರುವರಿ 28 ರವರೆಗೆ ಒಟ್ಟು 75.36 ಲಕ್ಷ ರೂ. ಪರಿಹಾರಧನ ವಿತರಿಸಲಾಗಿದ್ದು, ಇನ್ನುಳಿದ 10 ಪ್ರಕರಣಗಳ ಸಂತ್ರಸ್ತರಿಗೆ ಪರಿಹಾರಧನ ವಿತರಣೆಗೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರು ಸಾಲಸೌಲಭ್ಯ ಕೋರಿ ವಿವಿಧ ಬ್ಯಾಂಕ್‍ಗಳಿಗೆ ಹೋದ ಸಂದರ್ಭದಲ್ಲಿ ಸಕಾಲಕ್ಕೆ ಈ ಸೌಲಭ್ಯ ಕಲ್ಪಿಸಿ ಅರ್ಹ ಫಲಾನುಭವಿಗಳಿಗೆ ನೆರವಾಗುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ ವಿವಿಧ ಬ್ಯಾಂಕ್‍ಗಳಿಗೆ ಸಾಲಸೌಲಭ್ಯ ಕೋರಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಬಗ್ಗೆ ಪರಿಶೀಲಿಸಿ ಸಕಾಲಕ್ಕೆ ಅವರಿಗೆ ಸ್ಪಂದಿಸುವಂತಾಗಬೇಕು. ವಿವಿಧ ಬ್ಯಾಂಕ್‍ಗಳ ಮೂಲಕ ಸಕಾರಾತ್ಮಕ ಸ್ಪಂದನೆಯಾಗುವಂತೆ ನೋಡಿಕೊಳ್ಳಲು ತಿಳಿಸಿದ ಅವರು ಇದರಲ್ಲಿ ಯಾವುದೇ ರೀತಿಯ ಲೋಪವನ್ನು ಸಹಿಸಲಾಗುವುದಿಲ್ಲ. ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನಿನ ರೀತ್ಯ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ಪಾರದರ್ಶಕ ರೀತಿಯಲ್ಲಿ ದೊರೆಯುವಂತೆ ನೋಡಿಕೊಳ್ಳಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಈಗಾಗಲೇ ಸಿಸಿಟಿವಿ ಕ್ಯಾಮರಾ ಕಡ್ಡಾಯ ಅಳವಡಿಕೆಗೆ ಕ್ರಮಕೈಗೊಂಡಿದೆ. ಭೂ ಒಡೆತನ ಯೋಜನೆ ಸೇರಿದಂತೆ ವಯಕ್ತಿಕ ಸೌಲಭ್ಯಗಳ ಬಗ್ಗೆ ಕಾನೂನಿನ ರೀತ್ಯ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಬೇಕು. ಮಧ್ಯವರ್ತಿಗಳ ಹಾವಳಿ ಸೇರಿದಂತೆ ಸಾಕ್ಷ್ಯಾಧಾರ ಆಧಾರಿತ ದೂರು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
11 ಕೆ.ವಿ ಅತಾಲಟ್ಟಿ ಐಪಿ ಫೀಡರ್‍ನ ಭಾಗಶಃ ಭಾರವನ್ನು 11 ಕೆ.ವಿ ಮಹಾಲಬಾಗಾಯತ್ ಐಪಿ ಫೀಡರ್ ಮೇಲೆ ವರ್ಗಾಯಿಸುವ ಮೂಲಕ ಯಾವುದೇ ಅಡಚಣೆ ಉಂಟಾಗದಂತೆ ಸಮಸ್ಯೆಗೆ ಪರಿಹಾರ ಒದಗಿಸಲಾಗಿದೆ ಎಂದು ತಿಕೋಟಾ ಹೆಸ್ಕಾಂ ಅಧಿಕಾರಿಗಳು ತಿಳಿಸಿರುವ ಹಿನ್ನೆಲೆಯಲ್ಲಿ ಈ ಕುರಿತು ಪರಿಶೀಲನೆ ನಡೆಸುವಂತೆ ಹಾಗೂ ನಾಗೂರ ಗ್ರಾಮದಲ್ಲಿ ಕಾಲುವೆಯಿಂದ ಅನಧೀಕೃತವಾಗಿ ಮೋಟಾರ್ ಅಳವಡಿಸಿ ನೀರು ಎತ್ತುತ್ತಿರುವ ಸ್ಥಳ ಪರಿಶೀಲನೆ ಹಾಗೂ ಹೆಚ್ಚುವರಿ ಟಿಸಿ ಕೊಡುವ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ನ್ಯಾಯಾಲಯಗಳಿಗೆ ಸಾಕ್ಷಿ ನುಡಿಯಲು ಹಾಜರಾಗುವ ಸಂತ್ರಸ್ತರು ಮತ್ತು ಸಾಕ್ಷಿದಾರರಿಗೆ ಸೂಕ್ತ ಮಾಹಿತಿಯನ್ನು, ನಿಯಮಾನುಸಾರ ಪ್ರಯಾಣ ಭತ್ಯೆ ಮಂಜೂರಾತಿ ಬಗ್ಗೆ ಕ್ರಮಕೈಗೊಳ್ಳಬೇಕು. ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ನವೀಕರಣ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು, ಜಿಲ್ಲಾ ಕ್ರೀಡಾಂಗಣದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಮೂರ್ತಿ ಸ್ಥಳದ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ನೀರು ನಿಲ್ಲದಂತೆ, ಸರಾಗವಾಗಿ ನೀರು ಹರಿದುಹೋಗಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕೃಷಿ ಇಲಾಖೆ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ನಿಗದಿತ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ ವೃಂದದ ನೌಕರರ ಜೇಷ್ಠತಾ ಪಟ್ಟಿ ಹೊರಡಿಸಿ ನಿಯಮಾವಳಿಯಂತೆ ಮುಂಬಡ್ತಿ ನೀಡುವ ಬಗ್ಗೆ ಕ್ರಮಕೈಗೊಳ್ಳಬೇಕು. ಖಾಯಂ ಪೌರಕಾರ್ಮಿಕರು ಮತ್ತು ಗುತ್ತಿಗೆ ಆಧಾರಿತ ಪೌರಕಾರ್ಮಿಕರಿಗೆ ನಿಯಮಾವಳಿಯಂತೆ ಸೌಲಭ್ಯ ಕಲ್ಪಿಸಬೇಕು. ಎಸ್.ಸಿ.ಪಿ ಮತ್ತು ಟಿಎಸ್‍ಪಿ ಯೋಜನೆಯಡಿ ಕೆಬಿಜೆಎನ್‍ಎಲ್ ಮೂಲಕ ಸೌಲಭ್ಯ ಕಲ್ಪಿಸಿದ ತೆರೆದ ಬಾವಿಗಳ ಸ್ವಚ್ಛಗೊಳಿಸಿ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಕೈಗೊಳ್ಳಲು ಮತ್ತು ವಿವಿಧ ಗ್ರಾಮಗಳಲ್ಲಿ ಹೊಟೇಲ್, ಸಲೂನ್ ಸೇರಿದಂತೆ ಇತರೆ ಉದ್ಯೋಗ ಪರವಾನಿಗೆ ನೀಡುವ ಸಂದರ್ಭದಲ್ಲಿ ಷರತ್ತುಗಳನ್ನು ವಿಧಿಸಿ ಪರವಾನಿಗೆ ನೀಡುವಂತೆ ಸೂಚನೆ ನೀಡಿದರು.
ತೊರವಿ ಗ್ರಾಮದಲ್ಲಿ 18 ಲಕ್ಷ ರೂ. ವೆಚ್ಚದ ಅಂಗನವಾಡಿ ಕಟ್ಟಡ ಕಾಮಗಾರಿಯನ್ನು ಗುಣಮಟ್ಟದಲ್ಲಿ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ 45 ವರ್ಷ ಮೇಲ್ಪಟ್ಟವರು ತಕ್ಷಣ ಲಸಿಕೆ ಹಾಕಿಸಿಕೊಳ್ಳಬೇಕು. ನಿಯಮಾವಳಿಯಂತೆ ನಿಗದಿ ಪಡಿಸಿದ ಆಸ್ಪತ್ರೆಗಳಲ್ಲಿಯೇ ಕೋವಿಡ್-19 ಲಸಿಕೆ ಪಡೆದು ಆಬ್ಸರ್ವೇಶನ್‍ಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು ಕೇಸರಟ್ಟಿ ಗ್ರಾಮದಲ್ಲಿ ಎಸ್‍ಡಿಪಿ ಕ್ರಿಯಾ ಯೋಜನೆಯಡಿ 20 ಲಕ್ಷ ರೂ.ಗಳ ಕುಡಿಯುವ ನೀರಿನ ಯೋಜನೆಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಎಪ್ರೀಲ್ 15 ರೊಳಗೆ ಈ ಯೋಜನೆ ಪೂರ್ಣಗೊಳಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಿಸಿದ್ಧಿ, ಉಪವಿಭಾಗಾಧಿಕಾರಿಗಳಾದ ರಾಹುಲ್ ಸಿಂಧೆ, ಬಲರಾಮ ಲಮಾಣಿ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಡಿವೈಎಸ್ಪಿ ಟಿ.ಎಸ್ ಸುಲ್ಪಿ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಅಡಿವೆಪ್ಪ ಸಾಲಗಲ್, ಅರವಿಂದ ಸಾಲವಾಡಗಿ, ಸುರೇಶ ಮಣೂರ, ಮುತ್ತಣ್ಣ ಸಾಸನೂರ, ಬಸವರಾಜ ಪೂಜಾರಿ, ವಿನಾಯಕ ಗುಣಸಾಗರ, ಗಣಪತಿ ಬಾಣಿಕೋಲ, ರಾಜಶೇಖರ ಕೂಚಬಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ ಸ್ವಾಗತಿಸಿ, ವಂದಿಸಿದರು.