ದೋಣಿ ದುರಂತ ೫೦೦ಕ್ಕೂ ಅಧಿಕ ಮಂದಿ ಕಣ್ಮರೆ

ಗ್ರೀಸ್, ಜೂ.೧೭- ಇಲ್ಲಿನ ಕರಾವಳಿ ತೀರದಲ್ಲಿ ವಲಸಿಗರು ಸಾಗುತ್ತಿದ್ದ ಬೋಟ್ ಮುಳುಗಡೆ ಪ್ರಕರಣದಲ್ಲಿ ಈಗಲೂ ೫೦೦ಕ್ಕೂ ಅಧಿಕ ಮಂದಿ ಕಣ್ಮರೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ತಿಳಿಸಿದೆ.
ಅತೀ ಚಿಕ್ಕ ಬೋಟ್‌ನಲ್ಲಿ ಬರೊಬ್ಬರಿ ೭೫೦ಕ್ಕೂ ಹೆಚ್ಚಿನ ವಲಸಿಗರು ತೆರಳುತ್ತಿದ್ದು, ಮುಳುಗಿದ ಪರಿಣಾಮ ಈಗಾಗಲೇ ಸುಮಾರು ೮೦ ಮಂದಿ ಮೃತಪಟ್ಟಿದ್ದಾರೆ. ಸದ್ಯ ನಾಪತ್ತೆಯಾಗಿರುವವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಇದೇ ನಡುವೆ ಪ್ರತಿಕ್ರಿಯೆ ನೀಡಿರುವ ವಿಶ್ವಸಂಸ್ಥೆಯ ಮಾನಹ ಹಕ್ಕುಗಳ ಕಚೇರಿಯ ವಕ್ತಾರ ಜೆರೆಮಿ ಲಾರೆನ್ಸ್, ನಾಪತ್ತೆಯಾಗಿರುವ ಸುಮಾರು ೫೦೦ ವಲಸಿಗರಲ್ಲಿ ಮಹಿಳೆಯರುದ ಹಾಗೂ ಮಕ್ಕಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಕಳ್ಳಸಾಗಾಣಿಕ ಮೂಲಕ ಜನರನ್ನು ತರುವವರ ವಿರುದ್ಧ ಕಠಿಣ ಕಾನೂನಿನ ಕ್ರಮದ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀಸ್‌ನ ಹಂಗಾಮಿ ಪ್ರಧಾನಿ ಲೊವಾನಿಸ್ ಸರ್ಮಾಸ್, ದೋಣಿ ಮುಳುಗಲು ಕಾರಣವೇನು ಎಂಬುದನ್ನು ನಿರ್ಧರಿಸಲು ನೈಜ ಸಂಗತಿಗಳು ಮತ್ತು ತಾಂತ್ರಿಕ ತೀರ್ಪುಗಳ ಸಂಪೂರ್ಣ ತನಿಖೆ ಸದ್ಯ ನಡೆಯುತ್ತಿದೆ. ಇನ್ನು ವಲಸಿಗರು ತೆರಳುತ್ತಿದ್ದ ಬೋಟ್ ಮೇಲೆ ಗ್ರೀಸ್‌ನ ತಟರಕ್ಷಣಾ ಸಿಬ್ಬಂದಿಯ ಬೋಟ್ ದಾಳಿ ನಡೆಸಿತ್ತು ಎಂಬ ಆರೋಪವನ್ನು ಗ್ರೀಸ್ ಸಂಪೂರ್ಣವಾಗಿ ನಿರಾಕರಿಸಿದೆ.