ದೊರೆಸ್ವಾಮಿ ನಿಧನಕ್ಕೆ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಸಂತಾಪ

ಬಳ್ಳಾರಿ, ಮೇ.27: ಅಖಿಲ ಭಾರತ ಶಿಕ್ಷಣ ಉಳಸಿ ಸಮಿತಿಯು ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ, ಜೀವನದುದ್ದಕ್ಕೂ ಸಾಮಾಜಿಕ ಹೋರಾಟಗಾರರಾಗಿದ್ದ ಹೆಚ್. ಎಸ್. ದೊರೆಸ್ವಾಮಿಯವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಶಿಕ್ಷಣ ಉಳಿಸಿ ಸಮಿತಿಯ ಆರಂಭದ ದಿನಗಳಿಂದಲೂ ಸಂಘಟನೆಯ ಜೊತೆಗೆ ನಿಂತಿದ್ದ ದೊರೆಸ್ವಾಮಿಯವರು, ಸಂಘಟನೆಯ ರಾಜ್ಯ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಮುನ್ನಡೆಸಿದ್ದರು. ಇಂದಿನವರೆಗೂ ರಾಜ್ಯ ಸಲಹೆಗಾರರುಗಳಲ್ಲಿ ಒಬ್ಬರಾಗಿದ್ದರು.
ತಮ್ಮ ಜೀವನದುದ್ದಕ್ಕೂ ಪ್ರಜಾತಾಂತ್ರಿಕ ಮತ್ತು ಧರ್ಮನಿರಪೇಕ್ಷ ಶಿಕ್ಷಣದ ಪರವಾಗಿ, ಹಾಗು ಶಿಕ್ಷಣದ ವ್ಯಾಪಾರೀಕರಣ ಮತ್ತು ಕೋಮುವಾದೀಕರಣದ ವಿರುದ್ಧ ಗಟ್ಟಿಯಾಗಿ ನಿಂತಿದ್ದರು.
ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಶಾಲಾ ಪಠ್ಯಪುಸ್ತಕಗಳ ಕೇಸರೀಕರಣದ ಮೂಲಕ ಇತಿಹಾಸವನ್ನು ತಿರುಚಲು ಯತ್ನಿಸಿದಾಗ, ಕೇಂದ್ರ ಸರ್ಕಾರವು ಜೋತಿಷ್ಯವನ್ನು ವಿಜ್ಞಾನವೆಂದು ಸಾರಿ ವಿಶ್ವವಿದ್ಯಾಲಯದಲ್ಲಿ ಪರಿಚಯಿಸಲು ಯತ್ನಿಸಿದಾಗ, ಎಐಎಸ್‌ಇಸಿ ಒಟ್ಟಿಗೆ ನಿಂತ ದೊರೆಸ್ವಾಮಿಯವರು ಈ ನಡೆಗಳನ್ನು ತೀವ್ರವಾಗಿ ಪ್ರತಿಭಟಿಸಿದ್ದನ್ನು ಸ್ಮರಿಸಿದೆ.
ಶತಾಯುಷಿಯಾದರೂ, ಅನ್ಯಾಯದ ವಿರುದ್ಧದ ಯಾವುದೇ ಹೋರಾಟದಲ್ಲಿ ಮಂಚೂಣಿಯಲ್ಲಿರುತ್ತಿದ್ದರು. ಅವರ ನಿಧನದಿಂದ ರಾಜ್ಯದಲ್ಲಿನ ಪ್ರಜಾತಾಂತ್ರಿಕ ಚಳುವಳಿಗೆ ಅಗಾಧವಾದ ನಷ್ಟ ಉಂಟಾಗಿದೆ. ಆದರೆ ಅವರು ಇಂದಿನ ಯುವ ಪೀಳಿಗೆಗೆ ಸದಾಕಾಲ ಸ್ಫೂರ್ತಿಯಾಗಿದ್ದಾರೆಂದು ಸಮಿತಿಯ ಅಲ್ಲಮಪ್ರಭು ಬೆಟ್ಟದೂರು ರಾಜ್ಯ ಅಧ್ಯಕ್ಷ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.