ದೊರೆಸ್ವಾಮಿರವರ ಬದುಕು ಇಂದಿನ ಸಮಾಜಕ್ಕೆ ಆದರ್ಶ: ಖಾಶೆಂಪುರ್

ಬೀದರ:ಮೇ.27:ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಸ್ವಾತಂತ್ರ್ಯದ ನಂತರ ದೇಶದ ಒಳಿತಿಗಾಗಿ ಹೋರಾಡಿ ಅನೇಕ ಬಾರಿ ಸೆರೆವಾಸ ಅನುಭವಿಸಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿರವರ ನಿಧನದ ಸುದ್ದಿ ಕೇಳಿ ದುಃಖವಾಗುತ್ತಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ದೊರೆಸ್ವಾಮಿರವರು ಹಿರಿಯ ವಯಸ್ಸಿನಲ್ಲಿ ಕೂಡ ಅನೇಕ ಹೋರಾಟಗಳಲ್ಲಿ ಪಾಲ್ಗೊಂಡಿದ್ದಾರೆ. ನೆಲ, ಜಲ, ಭಾಷೆಯ ವಿಚಾರಗಳು ಬಂದಾಗ ಅವರು ಧ್ವನಿ ಎತ್ತುತ್ತಿದ್ದರು. ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರಾಗಿದ್ದರು. ಅವರ ಅಗಲಿಕೆಯಿಂದ ಈ ನಾಡು ಒಬ್ಬ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಕಳೆದುಕೊಂಡಂತಾಗಿದೆ.

ಅವರ ಬದುಕಿನ ಆದರ್ಶ ಮೌಲ್ಯಗಳು ಇಂದಿನ ಸಮಾಜಕ್ಕೆ ಆದರ್ಶವಾಗಿವೆ. ಅವರ ತತ್ವ ಸಿದ್ಧಾಂತಗಳನ್ನು ಇಂದಿನ ಯುವ ಸಮುದಾಯ ಅಳವಡಿಸಿಕೊಂಡು ಬದುಕಬೇಕಾಗಿದೆ. ದೊರೆಸ್ವಾಮಿರವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ. ಅವರ ಕುಟುಂಬ ವರ್ಗಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸಂತಾಪ ವ್ಯಕ್ತಪಡಿಸಿದ್ದಾರೆ.