ದೊರೆಯದ ವೇತನ, ಸಂಕಷ್ಟದಲ್ಲಿ ವೈದ್ಯರು, ಬೋಧಕರು

ಬೆಂಗಳೂರು, ಆ.೨೨- ರಾಜ್ಯ ವೈದ್ಯಕೀಯ ಶಿಕ್ಷಣ ವ್ಯಾಪ್ತಿಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಹಾಗೂ ಬೋಧಕರಿಗೆ ಸೇರಿ ಇತರ ಸಾವಿರಾರು ಸಿಬ್ಬಂದಿಗೆ ಸಕಾಲದಲ್ಲಿ ವೇತನ ಸಿಗದೆ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ(ಡಿಎಂಇ) ನಿರ್ಲಕ್ಷ್ಯದಿಂದ ಕಿದ್ವಾಯಿ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಯುರಾಲಜಿ ಸಂಸ್ಥೆ, ಜಯದೇವ, ಸಂಜಯಗಾಂಧಿ ಆಸ್ಪತ್ರೆ, ಕರ್ನಾಟಕ ಇನ್ಸಿಟಿಟ್ಯೂಟ್ ಆ ಎಂಡೋಕ್ರೈನಾಲಜಿ ಮತ್ತು ಸಂಶೋಧನೆ ಸಂಸ್ಥೆ.ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನೆ ಆಸ್ಪತ್ರೆ, ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸೇರಿ ಇತರೆ ಸ್ವಾಯತ್ತತೆ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ೩-೪ ತಿಂಗಳಿಂದ ನಿಗದಿತ ಸಮಯದಲ್ಲಿ ವೇತನ ಸಿಗದೆ ಪರದಾಡು ವಂತಾಗಿದೆ.ಈ ಹಿಂದೆ ಕೆ-೨ ಮೂಲಕ ಖಜಾನೆಗೆ ವೇತನ ಪ್ರಸ್ತಾವನೆ ಕಳುಹಿಸಿದರೆ ಪ್ರತಿ ತಿಂಗಳು ೫ನೇ ತಾರೀಖಿನೊಳಗೆ ಇವರೆಲ್ಲರಿಗೂ ವೇತನ ಸಿಗುತ್ತಿತ್ತು. ಆದರೆ, ವೇತನ ನೀಡುವ ಸಂಬಂಧಪಟ್ಟಂತೆ ಹೊಸದಾಗಿ ಎಚ್‌ಆರ್‌ಎಂಎಸ್ ಪದ್ಧತಿ ಜಾರಿಗೆ ಬಂದ ಹಿನ್ನೆಲೆಯಲ್ಲಿ ಡಿಎಂಇಗೆ ಎಲ್ಲ ಸಂಸ್ಥೆಗಳು ಸಂಬಳದ ಪ್ರಸ್ತಾವನೆ ಕಳುಹಿಸಿಕೊಡಬೇಕಿದೆ.ನಂತರ, ಡಿಎಂಇ ವಿಭಾಗದವರು ಎಚ್‌ಎಂಆರ್‌ಎಸ್ ತಂತ್ರಜ್ಞಾನದಲ್ಲಿ ಅಪ್‌ಲೋಡ್ ಮಾಡಬೇಕು. ಆಗ ನೌಕರರಿಗೆ ವೇತನ ದೊರೆಯುತ್ತದೆ. ಆದರೆ, ಈ ಪ್ರಕ್ರಿಯೆ ಮಾಡಬೇಕಿರುವ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ವಿಳಂಬದಿಂದಾಗಿ ಸಕಾಲದಲ್ಲಿ ವೇತನ ಕೈಸೇರದಂತಾಗಿದೆ.
ಇದರಿಂದಾಗಿ ನೌಕರರು ತಮ್ಮ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಕೆಲವರಿಗೆ ವೇತನ ಆಧಾರದಲ್ಲಿ ಬ್ಯಾಂಕಿನಲ್ಲಿ ಪಡೆದಿರುವ ಸಾಲಕ್ಕೆ ಕಂತು ಕಟ್ಟಲು ಸಾಧ್ಯವಾಗದೆ ಬಡ್ಡಿಯ ಹೊರೆ ಜಾಸ್ತಿಯಾಗುತ್ತಿದೆ.
ಹಳೇ ಪದ್ಧತಿಗೆ ಒತ್ತಾಯ:
ಎಚ್‌ಆರ್‌ಎಂಎಸ್ ಹಾಗೂ ಡಿಎಂಇ ವ್ಯವಸ್ಥೆ ಬರುವ ಮುನ್ನ ಆಯಾ ತಿಂಗಳು ನಿಗದಿತ ಸಮಯದಲ್ಲಿ ಸಿಬ್ಬಂದಿಗೆ ವೇತನ ಬರುತ್ತಿತ್ತು. ಆದರೆ, ಎಚ್‌ಆರ್‌ಎಂಎಸ್ ಜಾರಿಯಾದ ದಿನದಿಂದ ಇಂದಿನವರೆಗೂ ವೇತನದಲ್ಲಿ ವಿಳಂಬವಾಗುತ್ತಿದೆ. ಹೀಗಾಗಿ, ಎಚ್‌ಆರ್‌ಎಂಎಸ್ ವ್ಯವಸ್ಥೆಯಿಂದ ಸ್ವಾಯತತ್ತೆ ಸಂಸ್ಥೆಗಳಿಗೆ ಮುಕ್ತಿ ನೀಡಬೇಕು.
ಹಳೆಯ ಪದ್ಧತಿಯಂತೆ ವೇತನ ಬಿಡುಗಡೆಗೊಳಿಸಲು ಸರ್ಕಾರ ಮುಂದಾಗಬೇಕೆಂದು ನೌಕರರು ಅಳಲು ತೋಡಿಕೊಂಡಿದ್ದಾರೆ. ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಎಚ್‌ಆರ್‌ಎಂಎಸ್ ಪದ್ಧತಿ ಅನುಕೂಲವಾಗಿದೆ. ಕೆಲಸಕ್ಕೆ ಹಾಜರಾಗದೆ ಸಂಬಳ ಪಡೆಯುತ್ತಿರುವವರಿಗೆ ಕಡಿವಾಣ ಬೀಳುತ್ತದೆ. ಈ ವ್ಯವಸ್ಥೆಯ ಲೋಪದೋಷವನ್ನು ಸರಿಪಡಿಸಬೇಕು ಎನ್ನುತ್ತಾರೆ ಸಿಬ್ಬಂದಿ.