ದೊಬಿಗಲ್ಲಿ ಜನರ ಹಕ್ಕುಪತ್ರಕ್ಕಾಗಿ ನಾಳೆ ಧರಣಿ-ಎಂ.ಗಂಗಾಧರ

ಸಿಂಧನೂರು.ಜು.೧೪- ಸುಮಾರು ವರ್ಷಗಳಿಂದ ಸರಕಾರದ ಜಾಗದಲ್ಲಿ ವಾಸ ಮಾಡುವ ದೊಬಿಗಲ್ಲಿ ಜನರಿಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ನಾಳೆ ತಹಶೀಲ್ದಾರ ಕಚೇರಿ ಮುಂದೆ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐ (ಎಂಎಲ್) ರೆಡ್ ಸ್ಟಾರ್ ಪಕ್ಷದ ರಾಜ್ಯಸಮಿತಿ ಸದಸ್ಯರಾದ ಎಂ.ಗಂಗಾಧರ ತಿಳಿಸಿದರು.
ನಗರದ ಎಪಿಎಂಸಿ ಯಲ್ಲಿರುವ ಶ್ರಮಿಕ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಪೊಲೀಸ್ ಠಾಣೆ ಎದುರುಗಡೆ ಇರುವ ಸರ್ವೇ ನಂ ೭೬೮/೧ ಸರಕಾರಿ ಜಾಗದಲ್ಲಿ ಸುಮಾರು ವರ್ಷಗಳಿಂದ ೬೦ ಕುಟುಂಬ ಗಳು ವಾಸ ಮಾಡುತ್ತಿದ್ದು ಇವರಿಗೆ ಹಕ್ಕುಪತ್ರ ನೀಡುವಂತೆ ಹಿಂದೆ ಹಲವಾರು ಸಾರಿ ಹೋರಾಟ ಮಾಡಿದರೂ ಸಹ ಇಲ್ಲಿತನಕ ಜನರಿಗೆ ನಗರಸಭೆಯಿಂದ ಹಕ್ಕು ಪತ್ರ ಕೊಟ್ಟಿರುವುದಿಲ್ಲ.
ದೊಬಿಗಲ್ಲಿ ಜನರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಹಿಂದೆ ೮೮ ದಿನಗಳ ಕಾಲ ಹೋರಾಟ ನಡೆಸಿದಾಗ ಸಹಾಯಕ ಆಯುಕ್ತರು, ತಹಸೀಲ್ದಾರರು,ಮತ್ತು ನಗರಸಭೆ ಪೌರಾಯುಕ್ತರು ಧರಣಿ ಸ್ಥಳಕ್ಕೆ ಬಂದು ಹಕ್ಕುಪತ್ರ ನೀಡುವುದಾಗಿ ಲಿಖಿತ ರೂಪದಲ್ಲಿ ಬರೆದು ಕೊಟ್ಟಿದ್ದಾರೆ ಎಂದರು.
೭೬೮/೧ರಲ್ಲಿ ೬೦ ಕುಟುಂಬ ಗಳು ವಾಸ ಮಾಡುವ ಬಗ್ಗೆ ಕಂದಾಯ ಹಾಗೂ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಬಂದು ತನಿಖೆ ನಡೆಸಿ ೨೩ ಜನರ ಅರ್ಹರಾಗಿದ್ದು ಅವರಿಗೆ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿ ನಿವೇಶನ ರಹಿತ ಪ್ರಮಾಣ ಪತ್ರ ನಿಡಬೇಕೆಂದು ಅಧಿಕಾರಿಗಳು ಹೇಳಿದ್ದು ಎಲ್ಲಾ ದಾಖಲಾತಿಗಳನ್ನು ನೀಡಿ ಚಾನಲ್ (ಶುಲ್ಕ) ತುಂಬಲು ಹೇಳಿದ್ದು ಆದರೆ ಇಲ್ಲಿತನಕ ಹಕ್ಕುಪತ್ರ ನಿಡದೇ ಅಧಿಕಾರಿಗಳು ಹಾಗೂ ಶಾಸಕರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳು ಹಾಗೂ ಶಾಸಕರ ಜನ ವಿರೋಧಿ ನೀತಿ ಖಂಡಿಸಿ ದೊಬಿಗಲ್ಲಿ ವಾಸ ಮಾಡುವ ಬಡ ಜನರಿಗೆ ಹಕ್ಕು ಪತ್ರ ನೀಡಬೇಕೆಂದು ಒತ್ತಾಯಿಸಿ ನಾಳೆ ತಹಶೀಲ್ದಾರ ಕಚೇರಿ ಮುಂದೆ ಪ್ರತಿಭಟನೆ ಧರಣಿ ಹಮ್ಮಿಕೊಳ್ಳಲಾಗಿದ್ದು ನಮ್ಮ ಹೋರಾಟಕ್ಕೆ ನಗರದ ಸಂಘ ಸಂಸ್ಥೆಗಳ ಮುಖಂಡ ರು ಬೆಂಬಲಿಸಬೇಕೆಂದು ಎಂ ಗಂಗಾಧರ ಮನವಿ ಮಾಡಿಕೊಂಡರು.
ಸಿಪಿಐ ಎಂಎಲ್ ರೆಡ್ ಸ್ಟಾರ್ ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ, ಮುಖಂಡರಾದ ಎಚ್‌ಆರ್ ಹೊಸಮನಿ , ಹುಲುಗಪ್ಪ ಬಳ್ಳಾರಿ, ಮಾಬುಸಾಬ್ ಬೆಳ್ಳಟ್ಟಿ, ಅಂಬಣ್ಣ ಹಡಪದ,ವೆಂಕಟೇಶ ಮೆದಾರ್, ಮುದಿಯಪ್ಪ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.