ವಿಜಯಪುರ, ಏ ೯ ಇಲ್ಲಿಗೆ ಸಮೀಪದ ಹೋಬಳಿಯ ಹಳಿಯೂರು ಗ್ರಾಮದಲ್ಲಿ ನಿವೇಶನಕ್ಕಾಗಿ ಹಲವಾರು ತಿಂಗಳುಗಳಿಂದ ಗಲಾಟೆ ನಡೆಯುತ್ತಿದ್ದು, ಇದರ ಬಗ್ಗೆ ಅಕ್ಕಪಕ್ಕದ ಮನೆಯವರು ದೊಣ್ಣೆಗಳನ್ನು ಹಿಡಿದು ಹೊಡೆದಾಡಿಕೊಂಡ ಪರಿಣಾಮ ನಾರಾಯಣಸ್ವಾಮಿ (೮೫) ವೆಂಕಟ ಲಕ್ಷ್ಮಮ್ಮ (೭೫) ನಟರಾಜು, ವೆಂಕಟೇಶ್, ನಾಗರಾಜುರವರುಗಳಿಗೆ ತೀವ್ರ ಗಾಯಗಳಾಗಿದ್ದು ವಿಜಯಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕೊಂಡೊಯ್ಯಲಾಯಿತು
ವಿವರ;- ಹಳಿಯೂರಿನ ನಾರಾಯಣಸ್ವಾಮಿ ಹಾಗೂ ಮುನಿಆಂಜನಪ್ಪ ಅಕ್ಕ ಪಕ್ಕದ ಮನೆಯವರಾಗಿದ್ದು, ಈ ಹಿಂದೆ ಒಬ್ಬರೇ ಮಾಲೀಕರಿಂದ ಈರ್ವರು ಸುಮಾರು ಮೂರು ಗುಂಟೆಗಳಷ್ಟು ಜಮೀನನ್ನು ಕೊಂಡುಕೊಂಡಿದ್ದು, ವರ್ಷಗಳಿಂದ ಅವರವರ ಜಾಗದಲ್ಲಿ ವಾಸ ಮಾಡಿಕೊಂಡು ಬರುತ್ತಿದ್ದು, ಇತ್ತೀಚೆಗೆ ಪೋಡಿ ಮುಕ್ತ ಗ್ರಾಮ ಸಂದರ್ಭದಲ್ಲಿ ಸರ್ವೆ ನಡೆದ ಸಮಯದಲ್ಲಿ ನಾರಾಯಣಸ್ವಾಮಿರವರ ಜಾಗ ರಸ್ತೆಗೆ ಹೋಗುತ್ತಿದ್ದ ಕಾರಣ ಅವರ ಮನೆಯನ್ನು ತೆರವುಗೊಳಿಸಲು ತಹಸೀಲ್ದಾರ್ ರವರಿಂದ ಅನುಮತಿ ಪಡೆದು ಬಂದು ತೆರವುಗೊಳಿಸಲು ಹೋದಾಗ ಗಲಾಟೆ ಆಗಿದ್ದು, ನಂತರ ಇದರ ಬಗ್ಗೆ ತಹಸೀಲ್ದಾರ್ ಹಾಗೂ ವಿಭಾಗಾಧಿಕಾರಿಗಳು ತಡೆಯಜ್ಞೆ ನೀಡಿದ್ದು, ಈ ಸಂದರ್ಭದಲ್ಲಿ ನಾರಾಯಣಸ್ವಾಮಿರವರ ಮನೆ ಪಕ್ಕದಲ್ಲಿರುವ ಮುನಿಆಂಜನಪ್ಪ ಮತ್ತು ಕುಟುಂಬದವರುಗಳು ತಮ್ಮ ಮನೆಯ ಕಸ, ಸಗಣಿ ಮತ್ತಿತರೆ ತ್ಯಾಜ್ಯವನ್ನು ನಾರಾಯಣಸ್ವಾಮಿಯವರ ಮನೆಯ ಆವರಣದಲ್ಲಿ ಹಾಕುವುದು ಅಸಭ್ಯವಾಗಿ ನಡೆದುಕೊಳ್ಳುವುದು ಮಾಡುತ್ತಿದ್ದಾರೆಂದು, ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಠಾಣೆಯಲ್ಲಿ ಇದರ ಬಗ್ಗೆ ದೂರು ದಾಖಲಾಗದ ಕಾರಣ ನಾರಾಯಣಸ್ವಾಮಿ ರವರು ಮನೆಯ ಸುತ್ತ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಶನಿವಾರ ಬೆಳಗ್ಗೆ ಸುಮಾರು ೧೨ ಗಂಟೆ ಸಂದರ್ಭದಲ್ಲಿ ಮುನಿಯಪ್ಪ ಹಾಗೂ ಕುಟುಂಬದವರು ವೃದ್ಧರಾದ ನಾರಾಯಣಸ್ವಾಮಿ ಅವರ ಕುಟುಂಬದ ಮೇಲೆ ಹಲ್ಲೆ ನಡೆಸಿ ಸಿಸಿ ಕ್ಯಾಮೆರಾ ಗಳನ್ನು ಹೊಡೆದು ಹಾಕಿ ಅವರ ಮನೆಯಲ್ಲಿನ ಸಾಮಾನುಗಳನ್ನು ಹಾಳು ಮಾಡಿದ್ದು, ಇದರ ಬಗ್ಗೆ ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ವೃತ್ತ ನಿರೀಕ್ಷಕರಾದ ರವಿ ರವರು ದೂರನ್ನು ದಾಖಲಿಸಿಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿರುವುದಾಗಿ ತಿಳಿಸಿರುವರು.