ದೊಡ್ಡ ದುರಂತದ ಅಂಚಿನಲ್ಲಿರುವ ಪಾಕ್

ಕರಾಚಿ, ಆ.೪- ಪಾಕಿಸ್ತಾನವು ದೊಡ್ಡ ದುರಂತದ ಅಂಚಿನಲ್ಲಿದೆ ಎಂಬುದು ಸತ್ಯ. ಕರಾಳ ಯುಗದತ್ತ ನಾವು ಸಾಗುತ್ತಿದ್ದು, ಅಲ್ಲದೆ ಸದ್ಯ ದೇಶದಲ್ಲಿ ಅಘೋಷಿತ ಸೇನಾಡಳಿತ ಅಧಿಕಾರದಲ್ಲಿದ್ದು, ಮತ್ತೆ ಅಂಧಕಾರ ಯುಗಕ್ಕೆ ಕೊಂಡುಹೋಗುತ್ತಿದ್ದಾರೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಮೂಲಕವೇ ನಾವು ಎಲ್ಲಾ ರೀತಿಯ ಗೊಂದಲಗಳಿಂದ ಹೊರಬಹುದು ಎಂದು ದೇಶದ ಮಾಜಿ ಪ್ರಧಾನಿ, ಪಿಟಿಐ ಪಕ್ಷದ ನಾಯಕ ಇಮ್ರಾನ್ ಖಾನ್ ತಿಳಿಸಿದ್ದಾರೆ.
ಸುದ್ದಿಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಖಾನ್, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ಮಾತ್ರ ದೇಶದ ಸ್ಥಿರತೆಯನ್ನು ಪುನಃಸ್ಥಾಪಿಸಲು ಸಾಧ್ಯವಾಗಲಿದೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮಿಲಿಟರಿ ಸರ್ವಾಧಿಕಾರಿಗಳು ರಚಿಸದ ಏಕೈಕ ಪಕ್ಷವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷವನ್ನು ಕೆಡಹುವ ಹುನ್ನಾರ ನಡೆಸಲಾಗುತ್ತಿದೆ. ನನ್ನನ್ನು ಅಧಿಕಾರದಿಂದ ಕೆಳಗಿಳಿಸಿದರೆ ಪಿಟಿಐ ಪಕ್ಷವನ್ನು ದುರ್ಬಲಗೊಳಿಸಬಹುದು ಎಂದು ಪಾಕಿಸ್ತಾನ ಸೇನೆ ಯೋಜಿಸಿತ್ತು. ಆದರೆ ಇದಕ್ಕೆ ತದ್ವಿರುದ್ಧವಾಗಿ ನಮ್ಮ ಪಿಟಿಐ ಪಕ್ಷ ಭಾರೀ ಜನಮನ್ನಣೆ ಪಡೆದುಕೊಂಡಿದೆ. ನಮ್ಮ ಪಕ್ಷದ ಮಹಿಳೆ ಹಾಗೂ ಪುರುಷರು ಸೇರಿದಂತೆ ೧೦ ಸಾವಿರಕ್ಕೂ ಅಧಿಕ ಕಾರ್ಯಕರ್ತರನ್ನು ಜೈಲಿಗೆ ತಳ್ಳಲಾಗಿದೆ. ನನ್ನ ಮೇಲೆ ದೇಶದ್ರೋಹ, ಭಯೋತ್ಪಾದನೆ ಮತ್ತು ಕೊಲೆಗೆ ಪ್ರಚೋದನೆ ಸೇರಿದಂತೆ ಸುಮಾರು ೨೦೦ ಆರೋಪಗಳನ್ನು ಹೊರಿಸಲಾಗಿದೆ. ಇತ್ತೀಚಿಗೆ ನಡೆದ ಸೇನಾಡಳಿತ ಕಚೇರಿಗಳ ಮೇಲಿನ ದಾಳಿಯಲ್ಲಿ ನಾನು ಯಾವುದೇ ಪಾತ್ರವನ್ನು ಹೊಂದಿಲ್ಲ. ಅಲ್ಲದೆ ಇದರ ವಿಚಾರಣೆಯನ್ನು ಪ್ರತ್ಯೇಕವಾಗಿ ನಡೆಸಬೇಕಿದೆ. ನನ್ನನ್ನು ಪೊಲೀಸ್ ಅಧಿಕಾರಿಗಳ ಬದಲಾಗಿ, ಮಿಲಿಟರಿ ಸಿಬ್ಬಂದಿಯನ್ನು ಕಳುಹಿಸುವ ಸೇನಾಡಳಿತ ಕ್ರಮದಿಂದಾಗಿ ದೇಶದಲ್ಲಿ ದಂಗೆ ಏಳಲು ಕಾರಣವಾಗಿತ್ತು. ಸೇನೆ ಈ ರೀತಿ ನಡೆದುಕೊಂಡರೆ ದೇಶದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸುವುದಿಲ್ಲವೇ ಎಂದು ಖಾನ್ ತೀಕ್ಷ್ಮವಾಗಿ ಪ್ರತಿಕ್ರಿಯೆ ನೀಡಿದ್ದಾರೆ.