ದೊಡ್ಡಹಸಾಳ ಶಾಲೆ ಗೋಡೆ ಕುಸಿತ-ಬೀಳುವ ಹಂತದಲ್ಲಿ ೪ ಕೊಠಡಿಗಳು

ಕೋಲಾರ,ಸೆ.೮- ತಾಲೂಕಿನ ದೊಡ್ಡಹಸಾಳ ಗ್ರಾಮದ ಸರ್ಕಾರಿ ಶಾಲೆ ಗೋಡೆ ಕುಸಿತದ ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಹಸೀಲ್ದಾರ್ ನಾಗರಾಜ್ ಮಕ್ಕಳೊಂದಿಗೆ ಹೊರ ಆವರಣದಲ್ಲಿ ಕುಳಿತು ಬಿಸಿಯೂಟ ಸವಿದರು.
ಇತ್ತೀಚೆಗೆ ಸುರಿದ ಮಳೆಗೆ ಕೋಲಾರ ತಾಲೂಕಿನ ದೊಡ್ಡಹಸಾಳ ಗ್ರಾಮದ ಸರ್ಕಾರಿ ಶಾಲೆ ಗೋಡೆ ಕುಸಿದಿದ್ದು, ಆ ಸಂದರ್ಭದಲ್ಲಿ ಶಾಲೆಯಲ್ಲಿ ಮಕ್ಕಳಿಲ್ಲದ ಕಾರಣ ಯಾವುದೇ ಎದುರಾಗಿರಲಿಲ್ಲ. ಆದರ ಗೋಡೆ ಸಂಪೂರ್ಣ ಕುಸಿದಿರುವ ಕುರಿತು ಗ್ರಾಮಸ್ಥರು ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ತಹಶಿಲ್ದಾರ್ ವಿ.ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿ ಶಾಲಾ ಮಕ್ಕಳೊಂದಿಗೆ ಬಿಸಿ ಊಟ ಸವಿದರು.
ದೊಡ್ಡಹಸಾಳ ಗ್ರಾಮದ ನಮ್ಮೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಗೋಡೆ ಕುಸಿದು ಬಿದ್ದ ಬಗ್ಗೆ ಹಾಗೂ ಶಾಲೆಯ ನಾಲ್ಕು ಕೊಠಡಿಗಳು ಬೀಳುವ ಹಂತದಲ್ಲಿ ಇವೆ ಎಂದು ಗ್ರಾಮದ ಲೋಕೇಶ್‌ಗೌಡ ಎಂಬುವವರು ಕರೆ ಮಾಡಿ ಮಾಹಿತಿ ನೀಡಿದ ಹಿನ್ನೆಲೆ ತಹಶಿಲ್ದಾರ್ ನಾಗರಾಜ್ ಸ್ಥಳಕ್ಕೆ ಭೇಟಿ ನೀಡಿದ್ದರು.
ಇದೇ ವೇಳೆ ಮಕ್ಕಳ ಆರೋಗ್ಯ, ಹಾಜರಾತಿ, ಕಲಿಕೆ, ಮಧ್ಯಾಹ್ನದ ಊಟದ ಬಗ್ಗೆ ಪರಿಶೀಲನೆ ನಡೆಸಿದರು. ನಂತರ ತಹಶಿಲ್ದಾರ್ ನಾಗರಾಜ್ ಅವರು ಆಹಾರದ ಗುಣಮಟ್ಟ ನೋಡಲು ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸವಿದು ಒಳ್ಳೆಯ ತಾಜಾ ತರಕಾರಿ, ಸ್ವಚ್ಛವಾಗಿ ಅಡಿಗೆ ಮಾಡುವಂತೆ ಬಿಸಿ ಊಟ ತಯಾರಿಕರಿಗೆ ತಿಳಿಸಿದರು.
ಈ ವೇಳೆ ಮಾತನಾಡಿದ ತಹಶಿಲ್ದಾರ್ ವಿ ನಾಗರಾಜ್, ತಾನು ಕೂಡ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಇಂದು ವಿದ್ಯಾರ್ಥಿಗಳ ಮುಂದೆ ಅಧಿಕಾರಿಯಾಗಿ ಬಂದಿದ್ದೇನೆ. ವಿದ್ಯಾರ್ಥಿಗಳು ಕೂಡಾ ಒಳ್ಳೆಯ ವಿದ್ಯಾಭ್ಯಾಸ ಮಾಡಿ ಉನ್ನತ ಮಟ್ಟದ ಅಧಿಕಾರಿಗಳಾಗಬೇಕು. ಸರ್ಕಾರ ನಿಮ್ಮಗೆ ಎಲ್ಲಾ ವ್ಯವಸ್ಥೆ ಕಲ್ಪಿಸುತ್ತದೆ ಎಂದರು.
ದೊಡ್ಡಹಸಾಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೬೨ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಕಳೆದ ಇಪ್ಪತ್ತು ದಿನಗಳ ಹಿಂದೆ ಗೋಡೆ ಕುಸಿದು ಬಿದ್ದಿದೆ ಹಾಗೂ ಇದರ ಜೊತೆಗೆ ನಾಲ್ಕು ಕೊಠಡಿಗಳನ್ನು ಕೂಡಲೇ ದುರಸ್ತಿ ಮಾಡಿಕೊಡುವಂತೆ ಶಾಲಾ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಮಾನವಿ ಮಾಡಿದ್ದಾರೆ ಎಂದು ತಿಳಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಪಂ ಸಿಇಓ ಅವರ ಗಮನಕ್ಕೆ ತಂದು ಅತಿ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೇನೆ. ಗೋಡೆ ಕುಸಿತ ಹಾಗೂ ಕೊಠಡಿಗಳ ದುರಸ್ತಿ ಬಗ್ಗೆ ಶಾಲಾ ಆಡಳಿತ ಮಂಡಳಿ ಅವರು ಘಟನೆ ಬಗ್ಗೆ ಮಾಹಿತಿಯೊಂದಿಗೆ ಅರ್ಜಿ ನೀಡುವಂತೆ ಹೇಳಲಾಗಿದೆ ಎಂದರು.
ಶಿಥಿಲಗೊಂಡ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸದಂತೆ ಸೂಚಿಸಿ ಸುರಕ್ಷತೆ ಕುರಿತು ಎಚ್ಚರವಹಿಸಿ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಗ್ರಾಮದ ಮುಖಂಡ ಲೋಕೇಶ್ ಗೌಡ, ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಶಾಲಾ ಶಿಕ್ಷಕರು ಹಾಜರಿದ್ದರು.