ಹೊಸಕೋಟೆ, ಜೂ.೫- ತಾಲೂಕಿನ ಜಡಿಗೇನಹಳ್ಳಿ ಹೋಬಳಿ ವಾಗಟ ಗ್ರಾಮ ಪಂಚಾಯತ್ ವ್ಯಾಪ್ತಿಯ ದೊಡ್ಡದಾಸರಹಳ್ಳಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ದೊಡ್ಡಪ್ಪ, ಚಿಕ್ಕಪ್ಪನವರಿಂದಲೆ ತಮ್ಮ ಸೊಸೆಯ ಸಮಾಧಿಯನ್ನು ಧ್ವಂಸ ಮಾಡಿರುವ ಘಟನೆ ನಡೆದಿದೆ.
ದೊಡ್ಡದಾಸರಹಳ್ಳಿ ಗ್ರಾಮದ ಕೃಷ್ಣಪ್ಪನವರ ಪುತ್ರನಾದ ನಾಗರಾಜ್ ಎಂಬುವವರ ಹೆಂಡತಿ ಅರುಣಾ ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರನ್ನು ತಮ್ಮ ತೋಟದ ಬಳಿ ಸಮಾಧಿ ಮಾಡಲಾಗಿತ್ತು. ಶನಿವಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೃತ ಅರುಣಾ ಅವರ ಗಂಡ ನಾಗರಾಜ್ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರು ಸಮಾಧಿಗೆ ಪೂಜೆ ಸಲ್ಲಿಸಿ ತೆರಳಿದ್ದರು.
ಪೂಜೆ ಸಲ್ಲಿಸಿ ತೆರಳಿದ ನಂತರ ನಾಗರಾಜ್ ಅವರ ದೊಡ್ಡಪ್ಪ ರಾಜಪ್ಪ, ಚಿಕ್ಕಪನವರಾದ ಅನಿಲ್ ಕುಮಾರ್, ಮಾದೇಗೌಡ ಅವರು ಸಮಾಧಿ ಬಳಿಗೆ ಬಂದು ಕ್ಷುಲ್ಲಕ ಕಾರಣಕ್ಕೆ ಸಮಾಧಿಯನ್ನು ಧ್ವಂಸ ಮಾಡಿದ್ದಾರೆ. ಇದನ್ನು ಕಂಡ ನಾಗರಾಜ್ ಅವರ ತಮ್ಮ ಗೌತಮ್ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಲು ಮುಂದಾದಾಗ ಅವನ ಮೇಲೂ ಹಲ್ಲೆ ಮಾಡಲು ಯತ್ನಿಸಿ ಅವರ ಕಾರಿನ ಮೇಲೆ ಕಲ್ಲು ಎತ್ತು ಹಾಕಿ ಗಾಜು ಪುಡಿ ಪುಡಿ ಮಾಡಿದ್ದಾರೆ.
ಇನ್ನು ಘಟನೆ ವಿಚಾರವಾಗಿ ನಾಗರಾಜ್ ಪ್ರತಿಕ್ರಿಯಿಸಿದ್ದು ನಮ್ಮದು ಸುಮಾರು ೧೮ ಎಕರೆ ಜಮೀನಿದ್ದು, ೭ ಜನರ ಹೆಸರಿನಲ್ಲಿ ಜಂಟಿಯಾಗಿದ್ದು, ಇನ್ನು ವಿಭಾಗ ಮಾಡಿಕೊಂಡಿರುವುದಿಲ್ಲ. ನಾವು ಕೂಡ ಗ್ರಾಮವನ್ನು ತೊರೆದು ಭಕ್ತರಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದೇವೆ. ನಮ್ಮ ದೊಡ್ಡಪ್ಪ ರಾಜಪ್ಪ, ಚಿಕ್ಕಪ್ಪನವರಾದ ಅನಿಲ್ ಕುಮಾರ್, ಮಾದೇಗೌಡ ಅವರು ನನ್ನ ಹೆಂಡತಿ ಸತ್ತು ಒಂದು ವರ್ಷವಾಗಿದ್ದು, ಅಂದಿನಿಂದ ಸುಮ್ಮೆನೆ ಇದ್ದು, ಈಗ ಒಂದು ವರ್ಷದ ಪೂಜಾ ಕಾರ್ಯ ಮುಗಿದ ನಂತರ ಈ ರೀತಿ ದೌರ್ಜನ್ಯ ಎಸಗಿದ್ದಾರೆ. ಈ ಜಮೀನಿನಲ್ಲಿ ತಮ್ಮ ತಂದೆಗೂ ಪಾಲಿದೆ. ನಮ್ಮ ಜಮೀನಿನಲ್ಲಿ ನನ್ನ ಹೆಂಡತಿ ಸಮಾಧಿ ಮಾಡಿದ್ಧೇನೆ. ವಿನಾಕಾರಣವಾಗಿ ಈ ರೀತಿ ದೌರ್ಜನ್ಯ ಎಸಗಿರುವುದು ನಮ್ಮ ಕುಟುಂಬದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಆದ್ದರಿಂದ ಈ ವಿಚಾರವಾಗಿ ತಿರುಮಲ ಶೆಟ್ಟಿಹಳ್ಳಿ ಪೊಲೀಸ್ ಠಾಣೆಗೆ ದೂರನ್ನು ನೀಡಲಾಗಿದೆ ಎಂದರು.