ದೈಹಿಕ ಶಿಕ್ಷಕರ ಪರೀಕ್ಷೆಯಲ್ಲಿ‌ ಅಕ್ರಮ ; ದೂರು‌ ದಾಖಲಾದರೂ‌ ಸಿಗದ ನ್ಯಾಯ

ದಾವಣಗೆರೆ. ಸೆ.೧೦; ಕೆಪಿಎಸ್ ಸಿ ಆಯೋಗವು ೨೦೧೭ ನೇ ಸಾಲಿನಲ್ಲಿ ನಡೆಸಿದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ನಡೆದು ಪ್ರಕರಣ ದಾಖಲಾದರೂ ಕೂಡ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ವಕೀಲರಾದ ಅಸೀಸ್ ಪಾಷ ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ೨೦೧೭ ನೇ ಸಾಲಿನಲ್ಲಿ ಕೆಪಿಎಸ್ ಸಿ ಆಯೋಗವು ಮೊರಾರ್ಜಿ ದೇಸಾಯಿ ವಸತಿ‌ಶಾಲೆಗಳಲ್ಲಿ ೧೮೯ ದೈಹಿಕ ಶಿಕ್ಷಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಅಕ್ರಮ ನಡೆದಿದ್ದು ಈ ಬಗ್ಗೆ ದಾವಣಗೆರೆಯ ಆಜಾದ್ ನಗರ ಮತ್ತು ವಿದ್ಯಾನಗರ ಪೋಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿ ಅಕ್ರಮದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.ಈ ಪ್ರಕರಣಗಳಲ್ಲಿ ಇದುವರೆಗೂ ತನಿಖೆ ಸಂಪೂರ್ಣಗೊಳಿಸದೇ ಅಂತಿಮ ವರದಿ ನ್ಯಾಯಾಲಯಕ್ಕೆ ಸಲ್ಲಿಸದೇ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು. ನೇಮಕಾತಿ ಪ್ರಕ್ರಿಯೆ ತಡೆಗಟ್ಟಿ ಪ್ರಕರಣದಲ್ಲಿ ಬಾಗಿಯಾದವರ ಮೇಲೆ ಕ್ರಮಕೈಗೊಳ್ಳಬೇಕಿತ್ತು ಆದರೆ ಅದರ ಬದಲಾಗಿ‌ ೧೭೭ ಅಭ್ಯರ್ಥಿಗಳ ಆಯ್ಕೆ ಮಾಡಿ ಕರ್ತವ್ಯ ನಿರ್ವಹಿಸಲು ನೇಮಕಾತಿ ಮಾಡಿದೆ ಇದು ಕಾನೂನು‌ಬಾಹಿರವಾಗಿದೆ ಎಂದರು.ಕೆಲವು ಅಕ್ರಮ ನಡೆದ ಪರೀಕ್ಷೆಗಳ ನೇಮಕಾತಿ ಮಾಡುವುದು ಸರಿಯಲ್ಲ ಎಂದು  ಉಚ್ಚ ನ್ಯಾಯಾಲಯ ಮತ್ತು ಸವೋಚ್ಚ ನ್ಯಾಯಾಲಯ ತೀರ್ಪನ್ನು ನೀಡಿದರೂ ಕೂಡ ಸರ್ಕಾರ ಈ ಪ್ರಕರಣಗಳನ್ನು ವಿಧಾನ ಸಭೆಯಲ್ಲಿ ಮಂಡಿಸಿ ಅಕ್ರಮ ನೇಮಕಾತಿಯನ್ನು ಸಕ್ರಮಗೊಳಿಸಿರುವುದು ನೋಡಿದರೆ ಸರ್ಕಾರವು ಜನಸಾಮಾನ್ಯರಿಗೆ ಸಾಮಾಜಿಕ ನ್ಯಾಯ ನೀಡುವಲ್ಲಿ ಮತ್ತು ಭ್ರಷ್ಟಾಚಾರ ಮತ್ತು ಅಕ್ರಮ ತಡೆಯುವಲ್ಲಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣಕ್ಕೆ ಅಕ್ರಮ ನಡೆದಿರುವ ಪ್ರ ಕರಣಗಳಲ್ಲಿ ನೇಮಕಾತಿಯನ್ನು ತಡೆಹಿಡಿದು ಸಿ.ಬಿ.ಐ ತನಿಖೆಗೆ ಒಳಪಡಿಸಿ ನೊಂದ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿ ಕೊಡಬೇಕು. ಒಂದು ವೇಳೆ ಸರ್ಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಸರ್ಕಾರ, ಪೊಲೀಸ್ ಇಲಾಖೆ ಮತ್ತು ಅಭ್ಯರ್ಥಿಗಳ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆಯನ್ನು ನಡೆಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಎಂ.ಎ ಬಸವರಾಜ್, ಮುಸ್ತಫಾ,ರುದ್ರೇಶ್ ಇದ್ದರು.

Attachments area