ದೈಹಿಕ-ಮಾನಸಿಕ ಸ್ವಸ್ಥತೆಗೆ ನೃತ್ಯ ದಿವ್ಯ ಔಷಧ

ವಿಜಯಪುರಃ ಎ.29:ಪ್ರತಿವರ್ಷ ಏಪ್ರಿಲ್ 29, ವಿಶ್ವ ನೃತ್ಯ ದಿನ. ಯುನೆಸ್ಕೋದ ಅಂಗವಾದ ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಥಿಯೇಟರ್ಸ್ ನೃತ್ಯ ಸಮಿತಿಯು 1982 ರಲ್ಲಿ ವಿಶ್ವ ನೃತ್ಯ ದಿನ ಆಚರಣೆಯನ್ನು ಜಾರಿಗೆ ತರಲು ನಿರ್ಧರಿಸಿತು. ಫ್ರಾನ್ಸಿನ ಪ್ರಸಿದ್ಧ ನೃತ್ಯ ಕಲಾವಿದ ಜೀನ್ ಜಾರ್ಜ್ ನೊವೇರೆ ಅವರು 1727ರ ಏಪ್ರಿಲ್ 29ರಂದು ಜನಿಸಿದ ಹಿನ್ನೆಲೆಯಲ್ಲಿ ವಿಶ್ವ ನೃತ್ಯ ಕಲೆಗೆ ಗೌರವಪೂರ್ವಕವಾಗಿ ಈ ದಿನದ ಸಂಭ್ರಮಾಚರಣೆ ಜಾರಿಗೆ ಬಂತು.ವಿಶ್ವ ನೃತ್ಯ ದಿನವು ಪ್ರಪಂಚದಾದ್ಯಂತ ನೃತ್ಯದ ಜಾಗೃತಿ ಮತ್ತು ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ.

       ಭಾರತದಲ್ಲಿ ನಾಟ್ಯನರ್ತನಾದಿ ಕಲೆಗಳಿಗೆ ಸುಮಾರು 4000 ವರ್ಷಗಳ ದೀರ್ಘ ಪರಂಪರೆಯಿದೆ. ಋಗ್ವೇದದಲ್ಲಿ ನೃತ್ಯದ ಪ್ರಸಕ್ತಿಯಿದೆ. ಪಗಡೆ ದಾಳಗಳೊಂದಿಗೆ ಅಪ್ಸರೆಯರು ನೃತ್ಯಮಾಡಿದರೆಂಬ ವರ್ಣನೆ ಅಥರ್ವಣ ವೇದದಲ್ಲಿ ಉಂಟು. ಪಾಣಿನಿಯ ಅಷ್ಟಾಧ್ಯಾಯಿ ಮತ್ತು ಪತಂಜಲಿಯ ಮಹಾಭಾಷ್ಯ ಗ್ರಂಥಗಳಲ್ಲಿ ನಾಟ್ಯದ ಪ್ರಸ್ತಾಪವಿದೆ. ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳಲ್ಲಿ ನರ್ತನದ ವಿವರಗಳಿವೆ. ಅನೇಕ ನಾಟಕಕಾರರ ಕೃತಿಗಳಲ್ಲಿ ನೃತ್ಯಕ್ಕೆ ಸಂಬಂಧಪಟ್ಟ ವಿಪುಲ ವಿವರಗಳು ದೊರಕುತ್ತವೆ.
   ಭಾವತಾಳಲಯ ಯುಕ್ತವಾದ ಅಭಿನಯವೇ ನೃತ್ಯ. ನೃತ್ಯದಲ್ಲಿ ಲಾಸ್ಯ, ತಾಂಡವ ಎಂದು ಎರಡು ಬಗೆ. ಉದ್ಧತ ನೃತ್ಯವೇ ತಾಂಡವ.ಸುಕುಮಾರ ನೃತ್ಯವೇ ಲಾಸ್ಯ. ಪುರುಷ ಕರ್ತೃಕವಾದ ಉದ್ದತ ನೃತ್ಯವನ್ನು ತಾಂಡವವೆಂದು ಸ್ತ್ರೀಕರ್ತೃಕವಾದ ಲಾವಣ್ಯಯುಕ್ತ ನೃತ್ಯವನ್ನು ಲಾಸ್ಯವೆಂದು ಕರೆಯಲಾಗುತ್ತದೆ. ನೃತ್ಯದಲ್ಲಿ ಮಾರ್ಗ-ದೇಸಿ ಎಂಬ ಎರಡು ಪ್ರಭೇದಗಳಿವೆ. ಪರಂಪರೆಯಿಂದ ಕಾಲದೇಶ ಬದ್ಧವಾಗಿ ಉಳಿದು ಬಂದದ್ದು ದೇಸಿ ಅಥವಾ ಜನಪದವಾದರೆ, ಸಂಪ್ರದಾಯಬದ್ದ ಮತ್ತು ಶಾಸ್ತ್ರಪ್ರಣೀತವಾದದ್ದು ಮಾರ್ಗ. ಭಾರತದಲ್ಲಿ ಈ ಎರಡೂ ವರ್ಗ ಸೇರಿ ಅನೇಕ ನೃತ್ಯಗಳು ಪ್ರಚಲಿತದಲ್ಲಿವೆ.
   ಯಾವುದೇ ಸಂಗೀತಕ್ಕೆ ಅಥವಾ ಸ್ವತಃ ಹಾಡುತ್ತಾ ನರ್ತಿಸುವುದರಿಂದ ದೇಹಕ್ಕೆ ಉತ್ತಮ ವ್ಯಾಯಾಮ ಸಿಗುತ್ತದೆ. ಹೊಸ ಹೊಸ ಚಲನೆಗಳು ದೇಹವನ್ನು ಬಗ್ಗಿ ಬಳುಕಿಸಿ ಕ್ರಿಯಾಶೀಲವನ್ನಾಗಿ ಮಾಡುತ್ತವೆ. ಇದರಿಂದ ರಕ್ತಸಂಚಾರ, ಉಸಿರಾಟದ ಗತಿ ಹೆಚ್ಚುತ್ತದೆ. ಹೃದಯದ ಕ್ಷಮತೆ ಹೆಚ್ಚಿ ಶ್ವಾಸಕೊ?ಶ ಬಲವಾಗುತ್ತದೆ. ಹಾಗಾಗಿ ಓಟ, ನಡಿಗೆಗಿಂತ ನರ್ತಿಸುವುದು ಹೆಚ್ಚು ಪರಿಣಾಮಕಾರಿ. ಶಾಲೆಗೆ ಹೊ?ಗದೇ,ಯಾವುದೇ ಚಟುವಟಿಕೆ ಇಲ್ಲದೆ ಸದಾ ಮನೆಯಲ್ಲಿ ಇದ್ದು ಮಂಕಾಗಿರುವ ಮಕ್ಕಳಿಗಂತೂ ಉತ್ಸಾಹ ತುಂಬಲು, ಶಕ್ತಿಯನ್ನು ಸಮರ್ಥವಾಗಿ ಬಳಸಲು ನೃತ್ಯ ಅತ್ಯುತ್ತಮ ಸಾಧನ.
   ಬದುಕಿನ ಬಗ್ಗೆ ಅನಿಶ್ಚಿತತೆ ಕಾಡುವಾಗ ಅನೇಕ ಭಾವನೆಗಳನ್ನು ಅದುಮಿಡುವುದು ಅನಿವಾರ್ಯ.ಹೀಗೆ ಅದುಮಿಟ್ಟ ಭಾವನೆಗಳನ್ನು ಅತ್ಯಂತ ಸಕಾರಾತ್ಮಕವಾಗಿ ನೃತ್ಯದ ಮೂಲಕ ಅಭಿವ್ಯಕ್ತಿಸಬಹುದು. ಋಣಾತ್ಮಕ ಭಾವನೆ ಹೊರಹೊ?ಗಿ ಮನಸ್ಸಿಗೆ ಸಮಾಧಾನ ಸಿಗುತ್ತದೆ. ನರ್ತಿಸುತ್ತಾ ದೇಹ ಮತ್ತು ಮನಸ್ಸು ಕ್ರಿಯಾಶೀಲವಾಗಿ ಬದುಕನ್ನು ಧೈರ್ಯವಾಗಿ ಎದುರಿಸಬಲ್ಲೆ ಎಂಬ ಆತ್ಮವಿಶ್ವಾಸ ಮೂಡುತ್ತದೆ. ದೈಹಿಕ ಚಲನೆಗಳ ಮೂಲಕ ಅಂತರಂಗದ ಅಭಿವ್ಯಕ್ತಿಯಾಗಿ ಹೊರಹೊಮ್ಮುವ ನೃತ್ಯಕ್ಕೆ ನಿಬರ್ಂಧವಿಲ್ಲ. ನರ್ತಿಸಲು ವಯಸ್ಸು ಎಷ್ಟಾದರೇನು..ಮನಸ್ಸನ್ನು ತೆರೆದರೆ ಸಾಕು!
   ಯಾವುದೇ ನೃತ್ಯವಾದರೂ ಏಕಾಗ್ರತೆ, ಸಹನೆ ಬೇಕೇಬೇಕು. ಸರಳ ಚಲನೆಗಳೂ ದೇಹಕ್ಕೆ ರೂಢಿಯಾಗಲು ಸಮಯ ಅಗತ್ಯ. ನೃತ್ಯ ಮಾಡುತ್ತಾ ರೂಢಿಯಾಗುವ ಸಹನೆ ಬದುಕಿಗೂ ಅನ್ವಯವಾಗುತ್ತದೆ. ಒಳ್ಳೆಯ ದಿನಗಳಿಗಾಗಿ ಕಾಯುವ ತಾಳ್ಮೆಯನ್ನು ಕಲಿಸುತ್ತದೆ. ಬದುಕಿನ ಬಗ್ಗೆ ಆಶಾಭಾವನೆಯನ್ನು ಮೂಡಿಸುತ್ತದೆ.